ಸಿದ್ದಾಪುರ, ಜೂ. ೨೬: ಜಾನುವಾರುಗಳ ಮೇಲೆ ದಾಳಿ ನಡೆಸಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಸುತ್ತಾಡುತ್ತಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದು, ಹುಲಿ ಪತ್ತೆಯಾಗಿಲ್ಲ.

ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಮಾಲ್ದಾರೆ ವ್ಯಾಪ್ತಿಯ ಬಾಡಗ - ಬಾಣಂಗಾಲ ಗ್ರಾಮ ವ್ಯಾಪ್ತಿಯ ಟಾಟಾ ಹಾಗೂ ಬಿಬಿಟಿಸಿ ಸಂಸ್ಥೆಗಳ ಕಾಫಿ ತೋಟಗಳಲ್ಲಿ ಹಾಗೂ ಪೊದೆಗಳಲ್ಲಿ ಕೂಂಬಿAಗ್ ನಡೆಸಿದ್ದರು. ೨೫ ಮಂದಿ ಸಿಬ್ಬಂದಿಗಳು ೨ ತಂಡವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಹುಲಿಯು ಪತ್ತೆ ಆಗಲಿಲ್ಲ.

ಸುರಿಯುತ್ತಿರುವ ಮಳೆಯ ನಡುವೆ ಅರಣ್ಯ ಇಲಾಖಾಧಿಕಾರಿಗಳು ಹುಲಿ ಸೆರೆಗೆ ಅರವಳಿಕೆ ಔಷಧಿಯೊಂದಿಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಆದರೆ ಹುಲಿ ಪತ್ತೆ ಆಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಕಾರ್ಮಿಕರು ಭಯಬೀತರಾಗಿದ್ದಾರೆ.

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಮಾರ್ಗದರ್ಶನದಲ್ಲಿ ಎಸಿಎಫ್ ಉತ್ತಪ್ಪ, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ರಂಜನ್, ವನ್ಯಜೀವಿ ವೈದ್ಯಾಧಿಕಾರಿ ಡಾ|| ಪ್ರಶಾಂತ್, ಡಾ|| ಚಿಟ್ಟಿಯಪ್ಪ, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. - ವಾಸು