ಶನಿವಾರಸಂತೆ, ಜೂ. ೨೬: ದಿನದಿಂದ ದಿನಕ್ಕೆ ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಶನಿವಾರಸಂತೆ ಪಟ್ಟಣದಲ್ಲಿ ವಿಲೇವಾರಿಯಾಗದ ತ್ಯಾಜ್ಯ ರಾಶಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಪಟ್ಟಣಕ್ಕೆ ಬರುವವರನ್ನು ಪ್ರವೇಶ ದ್ವಾರದ ಬಳಿ ದುರ್ವಾಸನೆಯೊಂದಿಗೆ ತ್ಯಾಜ್ಯ ರಾಶಿ ಸ್ವಾಗತಿಸುತ್ತದೆ. ಹೋಬಳಿ ಕೇಂದ್ರವಾಗಿರುವ ಶನಿವಾರಸಂತೆಯಲ್ಲಿ ತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯದಿರುವುದು ಸಾರ್ವಜನಿಕ ಸಮಸ್ಯೆಯಾಗಿ ಕಾಡುತ್ತಿದ್ದು, ಜನತೆ ಬೇಸತ್ತಿದ್ದಾರೆ.
ಹತ್ತಾರು ಗ್ರಾಮ ವ್ಯಾಪ್ತಿಗಳಿಗೆ ಹೋಬಳಿ ಕೇಂದ್ರವಾಗಿರುವ ಶನಿವಾರಸಂತೆಗೆ ಪ್ರವೇಶಿಸುತ್ತಿದ್ದಂತೆ ‘ಸುಸ್ವಾಗತ’ ಎಂಬ ಬೃಹತ್ ನಾಮಫಲಕ ಸ್ವಾಗತಿಸುತ್ತದೆ. ಮುಂದೆ ಸಾಗುತ್ತಿದ್ದಂತೆ ದುರ್ವಾಸನೆಯೊಂದಿಗೆ ರಸ್ತೆ ಎಡಬದಿಯಲ್ಲಿ ತ್ಯಾಜ್ಯ ರಾಶಿ ಕಣ್ಣಿಗೆ ರಾಚುತ್ತದೆ.
ಪಕ್ಕದಲ್ಲೇ ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳಿವೆ. ಇದರ ಪಕ್ಕದಲ್ಲೇ ಸುರಿಯುವ ತ್ಯಾಜ್ಯ ರಾಶಿಯಂತೆ ಆರೋಗ್ಯಕ್ಕೆ ಹಾನಿಯಾಗಬಹುದು ಎಂಬ ಆತಂಕ ಸಾರ್ವಜನಿಕರದ್ದು.
ಪ್ರತಿದಿನ ಬೆಳಿಗ್ಗೆ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರು ಟ್ರಾö್ಯಕ್ಟರ್ನಲ್ಲಿ ಊರಿನ ತ್ಯಾಜ್ಯವನ್ನೆಲ್ಲ ಸಂಗ್ರಹಿಸಿ ತಂದು ಸ್ವಾಗತ ಫಲಕದ ಬಳಿಯೇ ಆರೋಗ್ಯ ಕೇಂದ್ರಕ್ಕೆ ತೆರಳುವ ರಸ್ತೆ ಪಕ್ಕದಲ್ಲೇ ಸುರಿಯುತ್ತಾರೆ. ತ್ಯಾಜ್ಯ ಸುರಿಯುವ ಈ ಕಾಯಕ ಹಲವಾರು ವರ್ಷಗಳಿಂದ ನಡೆಯುತ್ತಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ, ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಸರ್ದಾರ್ ಅಹಮ್ಮದ್ ಹಾಗೂ ಎಸ್.ಎನ್. ರಘು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರ ಬಳಿ ನಿಯೋಗ ತೆರಳಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಿರುತ್ತಾರೆ. ಶೀಘ್ರ ಘಟಕ ನಿರ್ಮಾಣದ ಬಗ್ಗೆ ಅಧಿಕಾರಿಯವರಿಂದ ಭರವಸೆ ದೊರೆತಿದೆ ಎಂದು ತಿಳಿಸಿರುತ್ತಾರೆ.
ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸರ್ಕಾರದಿಂದ ರೂ. ೨೦ ಲಕ್ಷ ಮಂಜೂರಾಗಿತ್ತು. ಆದರೆ, ಟೆಂಡರ್ ಆಗಿರಲಿಲ್ಲ. ಇದೀಗ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಟೆಂಡರ್ ಆಗಿದ್ದು, ಕಾನೂನು ಬದ್ಧವಾಗಿ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗದಲ್ಲಿ ಶೀಘ್ರ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿಕೊಡುವ ಭರವಸೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಂದ ದೊರೆತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸರ್ದಾರ್ ಅಹಮ್ಮದ್ ಹೇಳಿದರು.