ಗೋಣಿಕೊಪ್ಪಲು, ಜೂ. ೨೪: ಹಾತೂರು ಗ್ರಾಮ ಪಂಚಾಯಿತಿಗೆ ೨ನೇ ಅವಧಿಯ ಅಧ್ಯಕ್ಷರಾಗಿ ಗುಮ್ಮಟ್ಟೀರ ದರ್ಶನ್ ನಂಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಪ್ಪಂಡ ಗಿರಿ ಪೂವಣ್ಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ೧೫ ತಿಂಗಳ ಅವಧಿಗೆ ಗುಮ್ಮಟ್ಟೀರ ದರ್ಶನ್ ನಂಜಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಪೊನ್ನಂಪೇಟೆಯ ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಚುನಾವಣಾಧಿಕಾರಿಯಾಗಿ ಕಾರ್ಯ ನೆರವೇರಿಸಿದರು. ದರ್ಶನ್ ನಂಜಪ್ಪ ಹೊರತು ಪಡಿಸಿ ಬೇರೆ ಯಾವುದೇ ನಾಮ ಪತ್ರಗಳು ಸಲ್ಲಿಕೆ ಆಗದ ಕಾರಣ ಚುನಾವಣಾಧಿಕಾರಿ ದರ್ಶನ್ ಅವರನ್ನು ಆಯ್ಕೆ ಮಾಡಿ ಘೋಷಣೆ ಮಾಡಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದರ್ಶನ್ ನಂಜಪ್ಪ ಮಾತನಾಡಿ, ಹಾತೂರು ಪಂಚಾಯಿತಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು, ಅಧ್ಯಕ್ಷರಾಗಿದ್ದ ಕುಪ್ಪಂಡ ಗಿರಿಪೂವಣ್ಣರವರ ೧೫ ತಿಂಗಳ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮುಂದೆ ಪ್ರತಿ ವಾರ್ಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಶಾಸಕರ ಮೂಲಕ ಹೆಚ್ಚಿನ ಅನುದಾನವನ್ನು ತರುವ ಮೂಲಕ ಪಂಚಾಯಿತಿಯ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.

ಮಾಜಿ ಅಧ್ಯಕ್ಷ ಕುಪ್ಪಂಡ ಗಿರಿಪೂವಣ್ಣ, ಬಿಜೆಪಿ ವೀರಾಜಪೇಟೆ ಮಂಡಲದ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ವಾಟೇರಿರ ಬೋಪಣ್ಣ, ಖಜಾಂಚಿ ಮನೆಯಪಂಡ ಮಾಚು, ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ, ಪೊನ್ನಂಪೇಟೆ ಶಕ್ತಿ ಕೇಂದ್ರದ ಪ್ರಮುಖರಾದ ಮೂಕಳೇರ ಮಧು, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕವನ್, ಹಾತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಮ, ಸದಸ್ಯರಾದ ಸುಮ, ಬೋಜಿ, ಎಂ.ಎಸ್. ಕುಟ್ಟಪ್ಪ, ಕುಲ್ಲಚಂಡ ಚಿಣ್ಣಪ್ಪ, ಕೊಕ್ಕಂಡ ಗಣಪತಿ, ಜೆ.ಟಿ. ಭೀಮಯ್ಯ, ನಮಿತಾ, ಹೆಚ್.ಆರ್. ಪೊನ್ನಮ್ಮ. ಪಿ.ಎ. ಮುತ್ತುರಾಜ, ಪಿ. ಎಂ.ರತಿ, ಪಿ. ಸುಮಿತ್ರ, ಬಿ.ಪಿ. ರೇಖಾ, ಮಹೇಶ್, ಮ್ಯಾಥ್ಯೂ, ವಿಷ್ಮ, ಶ್ವೇತ, ಅಕ್ಕಮ್ಮ, ಸುನೀತ, ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.