ಮಡಿಕೇರಿ, ಜೂ. ೨೪: ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡೂರು ಗ್ರಾಮದಲ್ಲಿ ಕರ್ತವ್ಯದಲ್ಲಿರುವ ಯೋಧನ ಕುಟುಂಬ ಸೇರಿದಂತೆ ಕಾರ್ಮಿಕರ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದ್ದ ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ.

ಯಡೂರು ಗ್ರಾಮ ಸಮಿತಿ ವತಿಯಿಂದ ಕರ್ತವ್ಯದಲ್ಲಿರುವ ಯೋಧ ಸಂಜಯ್ ಹಾಗೂ ಕುಟುಂಬದವರು ಮತ್ತು ಕಾರ್ಮಿಕರನ್ನು ಬಹಿಷ್ಕಾರ ಹಾಕಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಆದೇಶದಂತೆ ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆ ಹಾಗೂ ಇತರ ಇಲಾಖಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಲ್ಲದೆ, ಬಹಿಷ್ಕಾರ ಹಾಕುವುದು ಕಾನೂನುಬಾಹಿರವೆಂದು ಅರಿವು ಮೂಡಿಸಿದ್ದರು.

ಈ ಹಿನ್ನೆಲೆಯಲ್ಲಿ ಗ್ರಾಮ ಸಮಿತಿ ನೇತೃತ್ವದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಯಾರನ್ನೂ ಬಹಿಷ್ಕಾರ ಹಾಕಿರುವುದಿಲ್ಲ ಎಂಬ ತೀರ್ಮಾನವನ್ನು ಹೊರಹಾಕಿದ್ದರು. ಇದಾದ ಬಳಿಕ ಗ್ರಾಮದಲ್ಲಿ ಬಹಿಷ್ಕಾರಕ್ಕೊಳಗಾಗಿದ್ದ ಯೋಧನ ತಂದೆ ಲಿಂಗರಾಜು, ಕಾರ್ಮಿಕರಾದ ಜಯಪ್ಪ, ಲಲಿತ ರಾಮಣ್ಣ ಅವರುಗಳು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬಹಿಷ್ಕಾರಕ್ಕೊಳಗಾದವರು ಹಾಗೂ ಗ್ರಾಮ ಸಮಿತಿಯ ಸಮಕ್ಷಮ ಸಭೆ ನಡೆದು ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಮಾಭಿವೃದ್ಧಿ ಸಮಿತಿಯವರಾಗಲಿ, ಗ್ರಾಮಸ್ಥರಾಗಲಿ ಇವರುಗಳನ್ನು ಸಾಮಾಜಿಕ ಬಹಿಷ್ಕಾರ ಬಿಟ್ಟಿರುವುದಿಲ್ಲ ಎಂದು ಗ್ರಾಮಾಭಿವೃದ್ಧಿ ಸಮಿತಿಯವರು ಗ್ರಾಮ ಪಂಚಾಯಿತಿ, ತಹಶೀಲ್ದಾರರಿಗೆ, ಪೊಲೀಸ್ ಠಾಣಾಧಿಕಾರಿಗಳಿಗೆ ಲಿಖಿತವಾಗಿ ಹೇಳಿಕೆ ನೀಡಿದ್ದಾರೆ.

ಅಲ್ಲದೆ, ಹಣ ಹೂಡಿಕೆಯ ವಿಚಾರ ಸಂಬAಧ ಚರ್ಚೆ ನಡೆದು ಹಣ ಮರುಪಾವತಿ ಬಗ್ಗೆ ಲಿಂಗರಾಜು ಹಾಗೂ ಪಾರ್ವತಿ ಅವರಲ್ಲಿ ಗ್ರಾಮಸ್ಥರು ಪ್ರಶ್ನಿಸಿದ ಸಂದರ್ಭ ಪ್ರಸ್ತುತ ಪಿಎಸಿಎಲ್ ಕಂಪೆನಿಯ ಎಲ್ಲಾ ವ್ಯವಹಾರಗಳನ್ನೂ ಮುಟ್ಟುಗೋಲು ಹಾಕಲಾಗಿದ್ದು, ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ನ್ಯಾಯಾಲಯದ ತೀರ್ಪಿಗೆ ನಾವುಗಳು ಬದ್ಧರಾಗಿರುತ್ತೇವೆ. ನ್ಯಾಯಾಲಯ ನೀಡುವ ಯಾವುದೇ ಆದೇಶವನ್ನು ಪಾಲಿಸಲು ಬದ್ಧರಾಗಿರುವುದಾಗಿ ಏಜೆಂಟರಾಗಿರುವ ಎ.ಎಲ್. ಪಾರ್ವತಿ ಕೂಡ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ಇಲ್ಲಿಗೆ ಈ ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದ್ದು, ಬಹಿಷ್ಕಾರದ ಕರಿನೆರಳಿನಿಂದ ಮೂರು ಕುಟುಂಬಗಳು ಹೊರಬಂದಿವೆ. -ಸಂತೋಷ್.