ಮಡಿಕೇರಿ, ಜೂ. ೨೪: ತಾ. ೧೨ ರಂದು ಪಾಲಿಬೆಟ್ಟ ಸಮೀಪದ ಮೇಕೂರು ಹೊಸ್ಕೇರಿ ಗ್ರಾಮದ ಕೂತಂಡ ಸುಬ್ಬಯ್ಯ ಎಂಬವರ ಮನೆಗೆ ನುಗ್ಗಿ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾ. ಮಲಚೀರ ಎ ಅಯ್ಯಪ್ಪ ತಿಳಿಸಿದರು.

ಈ ಬಗ್ಗೆ ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೂಲತಃ ಅಸ್ಸಾಂ ರಾಜ್ಯದ ಧರಂಗ್‌ನ ನಿವಾಸಿ ಕುರ್ಬನ್ ಆಲಿ (೨೦), ಅಸ್ಸಾಂ ರಾಜ್ಯದ ದೊಂಗ ಜಿಲ್ಲೆಯ ಬಾರೋಪಾರಾ ಗ್ರಾಮದ ಮಹಿರುದ್ದೀನ್ ಅಲಿ (೨೮) ಎಂಬವರನ್ನು ಬಂಧಿಸಲಾಗಿದೆ. ಅಸ್ಸಾಂ ರಾಜ್ಯದ ಮತ್ತಿಬ್ಬರು ಆರೋಪಿಗಳಾದ ಸಫಿಕೂಲ್ ಇಸ್ಲಾಂ (ಬಾಬು) ಹಾಗೂ ಮೊಹಿಬುಲ್ ಇಸ್ಲಾಂ ಎಂಬವರು ತಲೆಮರೆಸಿ ಕೊಂಡಿದ್ದಾರೆ. ಬಂಧಿತರು ಮೇಕೂರು ಹೊಸ್ಕೇರಿಯ ದುಬಾರೆ ಚೆಟ್ಟಿನಾಡು ಪ್ಲಾಂಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಲೈನ್ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಅಯ್ಯಪ್ಪ ಮಾಹಿತಿ ನೀಡಿದರು.

ಘಟನೆ ಹಿನ್ನೆಲೆ

ಘಟನೆ ನಡೆದ ದಿನದಂದು ಸುಬ್ಬಯ್ಯ ಹಾಗೂ ಅವರ ಪತ್ನಿ ಬೆಳಿಗ್ಗೆ ೧೧.೩೦ರ ಸುಮಾರಿಗೆ ಅಂಗಡಿಗೆ ಸಾಮಗ್ರಿ ಖರೀದಿಸಲೆಂದು ತೆರಳಿದ್ದರು. ಇದೇ ಸಮಯದಲ್ಲಿ ಖದೀಮರು ಬಂದು ಬಾಗಿಲು ಒಡೆದು ಕೋಣೆಯಲ್ಲಿದ್ದ ಬೀರು ಹಾಗೂ ಬಾಕ್ಸ್ಗಳಲ್ಲಿದ್ದ ಲಕ್ಷಾಂತರ ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ. ಮಧ್ಯಾಹ್ನ ೧.೩೦ಕ್ಕೆ ಖರೀದಿ ಮುಗಿಸಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ತಕ್ಷಣ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ಸುಬ್ಬಯ್ಯ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.

ನಂತರ ಕಾರ್ಯಾಚರಣೆ ಕೈಗೊಂಡ ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಅಕ್ಕಪಕ್ಕದ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಗಮನಿಸಿದಾಗ ಆರೋಪಿತರ ಬಗ್ಗೆ ಸುಳಿವು ಲಭ್ಯವಾಗಿದೆ. ನಂತರ ಆರೋಪಿಗಳನ್ನು ವಾಸವಿದ್ದ ಲೈನ್‌ಮನೆಯಲ್ಲಿ ಪೊಲೀಸರು ಬಂಧಿಸಿ ಅವರ ಬಳಿ ಇದ್ದ ಚಿನ್ನಾಭರಣಗಳನ್ನು ವಶಪಡಿಸಿ ಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳು ತಲೆಮರೆಸಿ ಕೊಂಡಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

(ಮೊದಲ ಪುಟದಿಂದ) ಕಳವಾಗಿದ್ದ ರೂ. ೧೧.೭೦ ಲಕ್ಷ ಮೌಲ್ಯದ ೨೪೭ ಗ್ರಾಂ ಚಿನ್ನಾಭರಣಗಳು ಹಾಗೂ ಪೀಚೆಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಜ್ರದ ಆಭರಣಗಳನ್ನು ಪರಾರಿ ಯಾಗಿರುವವರು ತೆಗೆದುಕೊಂಡು ಹೋಗಿದ್ದು, ಅವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರು ವಿವರಿಸಿದರು.

ಬಂದ ಮರುದಿನವೇ ಕೃತ್ಯ

ತಲೆಮರೆಸಿಕೊಂಡ ಈರ್ವರು ಆರೋಪಿಗಳು ತಾ. ೧೧ ರಂದು ಜಿಲ್ಲೆಗೆ ಆಗಮಿಸಿ ತಾ. ೧೨ ರಂದು ಕಳ್ಳತನ ನಡೆಸಿ ಅದೇ ದಿನ ಮಧ್ಯಾಹ್ನ ಪರಾರಿಯಾಗಿದ್ದಾರೆ.

ಬಂಧಿತ ಆರೋಪಿಗಳು ಕಳೆದ ೧೧ ತಿಂಗಳುಗಳಿAದ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಸ್ನೇಹಿತರಾಗಿದ್ದ ಸಫಿಕೂಲ್ ಇಸ್ಲಾಂ ಹಾಗೂ ಮೊಹಿಬುಲ್ ಇಸ್ಲಾಂ ಕೆಲಸಕ್ಕೆಂದು ಹೇಳಿಕೊಂಡು ಬಂದಿದ್ದಾರೆ. ಅದೇ ದಿನ ಸಂಚು ರೂಪಿಸಿ ಮರುದಿನ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳು ಅವರೊಂದಿಗೆ ಯುವತಿಯೊಬ್ಬಳನ್ನು ಕರೆತಂದಿದ್ದರು. ಆಕೆಯ ಮನೆಯವರಿಂದ ಸಮಸ್ಯೆ ಉಂಟಾಗಿದೆ ಎಂದು ತೋಟದ ಸಿಬ್ಬಂದಿಗಳಿಗೆ ತಿಳಿಸಿ ಯಾರಿಗೂ ಅನುಮಾನ ಬರಬಾರದಂತೆ ಕಾಲ್ಕಿತ್ತ ಆರೋಪಿಗಳು ಅಸ್ಸಾಂ ಸೇರಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಮಾರ್ಗದರ್ಶನ, ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ಪಿ.ವಿ. ವೆಂಕಟೇಶ್, ಡಿಸಿಆರ್‌ಬಿ ನಿರೀಕ್ಷಕ ನಾಗೇಶ್ ಕದ್ರಿ, ಸಿದ್ದಾಪುರ ಉಪ ನಿರೀಕ್ಷಕರಾದ ಮೋಹನ್ ರಾಜು, ಪ್ರೊಬೆಷನರಿ ಪಿಎಸ್‌ಐ ಪ್ರಮೋದ್, ಸಹಾಯಕ ನಿರೀಕ್ಷಕರಾದ ಎನ್.ಟಿ. ತಮ್ಮಯ್ಯ, ದೇವಯ್ಯ ಬಿ.ಸಿ, ಡಿಸಿಆರ್‌ಬಿ ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ಸುರೇಶ್, ವಸಂತ್, ಅನಿಲ್ ಕುಮಾರ್, ವೆಂಕಟೇಶ್, ರತನ್, ಲಕ್ಷಿö್ಮಕಾಂತ್, ಕಿರಣ್, ಚರ್ಮಣ, ದಿನೇಶ್, ನಾಗರಾಜ್ ಕಡಗನ್ನನವರ್, ವಸಂತ್ ಕುಮಾರ್, ಮಲ್ಲಪ್ಪ ಮುಷಿಗೇರಿ, ತಮ್ಮಯ್ಯ, ಶಿವಪ್ಪ, ಶರತ್ ರೈ, ಪ್ರವೀಣ್, ಗಿರೀಶ್, ದೇವರಾಜು, ಗೋವರ್ಧನ್, ಶಶಿಕುಮಾರ್ ಭಾಗವಹಿಸಿದ್ದರು.