ಸಿದ್ದಾಪುರ, ಜೂ. ೨೪ : ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸುತ್ತಿದ್ದ ಹುಲಿಯ ಚಲನವಲನಗಳನ್ನು ಕಂಡುಹಿಡಿಯಲು ಕ್ಯಾಮರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿರುವುದು ಮಾರ್ಗೊಲ್ಲಿ ಕಾಫಿ ತೋಟದಲ್ಲಿ ಕಂಡು ಬಂದಿದೆ. ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಖಾಸಗಿ ಸಂಸ್ಥೆಯ ಕಾಫಿ ತೋಟಗಳಲ್ಲಿ ಹುಲಿಯೊಂದು ಬೀಡುಬಿಟ್ಟು ಜಾನುವಾರುಗಳ ಮೇಲೆ ಕಳೆದ ಕೆಲವು ತಿಂಗಳಿನಿAದ ನಿರಂತರವಾಗಿ ಜಾನುವಾರುಗಳನ್ನು ಸಾಯಿಸುತ್ತಾ ಮಾಂಸವನ್ನು ತಿಂದು ತೆರಳುತ್ತಿತ್ತು.

ಮಾಲ್ದಾರೆ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮಗಳಲ್ಲಿ ಗ್ರಾಮಸ್ಥರು ಮೇಯಲು ಬಿಟ್ಟಿದ್ದ ಜಾನುವಾರುಗಳ ಮೇಲೆ ಹುಲಿ ಧಾಳಿ ನಡೆಸಿ ಸಾಯಿಸಿರುವ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿತ್ತು. ಅಲ್ಲದೇ ಕಳೆದ ಕೆಲವು ತಿಂಗಳ ಹಿಂದೆ ಮಾರ್ಗೊಲ್ಲಿ ಕಾಫಿ ತೋಟದಲ್ಲಿ ಹಾಡುಹಗಲೇ ಹುಲಿಯು ಪ್ರತ್ಯಕ್ಷಗೊಂಡಿದ್ದು, ಕಾರ್ಮಿಕರು ಹುಲಿಯು ಕಾಫಿ ತೋಟದ ಒಳಗೆ ತೆರಳುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇದೀಗ ಕಳೆದ ಎರಡು ದಿನಗಳ ಹಿಂದೆ ಕಾಡು ದನವೊಂದನ್ನು ಹುಲಿಯು ಧಾಳಿ ನಡೆಸಿ ಸಾಯಿಸಿ ಅದರ ಮಾಂಸವನ್ನು ತಿನ್ನಲು ತೆರಳುತ್ತಿರುವ ದೃಶ್ಯವು ಅರಣ್ಯ ಇಲಾಖೆಯು ಹುಲಿಯ ಚಲನವಲನ ಕಂಡು ಹಿಡಿಯಲು ಅಳವಡಿಸಿದ್ದ ಕ್ಯಾಮರಾ ದಲ್ಲಿ ಸೆರೆಯಾಗಿರುತ್ತದೆ. ಈ ಹಿನ್ನೆಲೆ ಯಲ್ಲಿ ಆ ಭಾಗದ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜಾನುವಾರು ಹಂತಕ ವನ್ಯಜೀವಿ ಹುಲಿಯ ಸೆರೆಗೆ ಮುಂದಾಗಿದೆ. ಈ ವಿಭಾಗವು ತಿತಿಮತಿ ಅರಣ್ಯ ವಲಯದ ವ್ಯಾಪ್ತಿಗೆ ಒಳಪಟ್ಟಿದೆ.

(ಮೊದಲ ಪುಟದಿಂದ) ತಿತಿಮತಿ ಅರಣ್ಯ ವಲಯಾಧಿಕಾರಿ ಅಶೋಕ್ ಅವರು ಸಿಬ್ಬಂದಿ ಸಹಿತ ಇದೀಗ ಮಾರ್ಗೊಲ್ಲಿ ತೋಟದಲ್ಲಿ ಇಂದು ಬೀಡುಬಿಟ್ಟಿದ್ದಾರೆ. ಹುಲಿಯು ಕಾಡು ದನವನ್ನು ಕೊಂದಿದ್ದ ಸ್ಥಳದ ಬಳಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಅರೆವಳಿಕೆ ಚುಚ್ಚು ಮದ್ದು ಪ್ರಯೋಗ ಹಾಗೂ ಹುಲಿ ಸೆರೆ ಕಾರ್ಯಾಚರಣೆಗಾಗಿ ಮೈಸೂರು ಮೃಗಾಲಯದಿಂದ ಡಾ|| ಪ್ರಶಾಂತ್, ಕುಶಾಲನಗರದಿಂದ ಡಾ|| ಬೆಟ್ಟಿಯಪ್ಪ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಜನ್ ಇವರುಗಳನ್ನು ಕರೆಸಲಾಗುತ್ತಿದೆ ಎಂದು ಅಶೋಕ್ ಹುನಗುಂದ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಚೆನ್ನಂಗಿ ಬಸವನಹಳ್ಳಿ ಗ್ರಾಮದ ಜನವಸತಿ ಪ್ರದೇಶಗಳಲ್ಲಿ ಹುಲಿಯು ರಾತ್ರಿ ಸಮಯದಲ್ಲಿ ಓಡಾಡುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಇದಲ್ಲದೇ ಇತ್ತೀಚೆಗೆ ಮಾಲ್ದಾರೆ ಸಮೀಪದ ಲಿಂಗಿ ಎಂಬವರಿಗೆ ಸೇರಿದ ಹಸುವೊಂದನ್ನು ಹುಲಿಯು ಧಾಳಿ ನಡೆಸಿ ಸಾಯಿಸಿತ್ತು. ಅಲ್ಲದೇ ಮಾಲ್ದಾರೆ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಹುಲಿಯು ಗ್ರಾಮಸ್ಥರಿಗೆ ಕಾಣಿಸಿಕೊಳ್ಳುತ್ತಿತ್ತು. ಬಾಡಗ ಬಾಣಂಗಾಲ ವ್ಯಾಪ್ತಿಯ ಖಾಸಗಿ ಸಂಸ್ಥೆಯ ಕಾಫಿ ತೋಟಗಳಳ್ಲಿ ನೂರಾರು ಸಂಖ್ಯೆಯಲ್ಲಿ ಕಾಡು ದನಗಳು ಬೀಡುಬಿಟ್ಟು ಕಾಫಿ ತೋಟಗಳಲ್ಲಿ ಸುತ್ತಾಡುತ್ತಿದೆ. ಇವುಗಳ ಮೇಲೆ ಹುಲಿಯು ಧಾಳಿ ನಡೆಸಿ ಸಾಯಿಸುತ್ತಿದ್ದು, ವಾರಿಸುದಾರರು ಇಲ್ಲದೇ ಆಗಿಂದಾಗ್ಗೆ ಕಾಫಿ ತೋಟಗಳಲ್ಲಿ ಹುಲಿ ಧಾಳಿ ನಡೆಸಿ ಸಾಯಿಸಿರುವ ಜಾನುವಾರುಗಳ ಕಳೇಬರಗಳು ಪತ್ತೆಯಾಗುತ್ತಿದೆ ಎಂದು ತಿಳಿದು ಬಂದಿದೆ.

ಕೂಂಬಿAಗ್: ಬಾಡಗ ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಕಾಫಿ ತೋಟದಲ್ಲಿ ಹುಲಿ ಓಡಾಡುತ್ತಿ ರುವ ದೃಶ್ಯವು ಅರಣ್ಯ ಇಲಾಖೆಯ ಕ್ಯಾಮರಾದಲ್ಲಿ ಸೆರೆಯಾಗಿದ ಹಿನ್ನೆಲೆಯಲ್ಲಿ ಹುಲಿಯ ಚಲನ ವಲನವನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ವೀರಾಜಪೇಟೆ ತಾಲೂಕಿನ ಡಿ.ಸಿ.ಎಫ್ ಚಕ್ರಪಾಣಿ ಮಾರ್ಗದರ್ಶ ನದಲ್ಲಿ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹಾಗೂ ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಬಿಬಿಟಿಸಿ ಸಂಸ್ಥೆಗೆ ಸೇರಿದ ಕಾಫಿ ತೋಟಗಳಲ್ಲಿ ಕೂಂಬಿAಗ್ ನಡೆಸಿದರು.

ಮತ್ತೊಂದು ತೋಟದಲ್ಲಿ ಕೂಂಬಿAಗ್

ಕಳೆದೆರಡು ದಿನಗಳ ಹಿಂದೆ ಪಾಲಿಬೆಟ್ಟದ ಖಾಸಗಿ ಕಾಫಿ ತೋಟದಲ್ಲಿ ಹುಲಿಯೊಂದು ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸಿ ತಿಂದಿರುವ ಹಿನ್ನೆಲೆಯಲ್ಲಿ ಹುಲಿಯ ಚಲನವಲನವನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರದಂದು ಕಾಫಿ ತೋಟದ ಒಳಗೆ ಕೂಂಬಿAಗ್ ನಡೆಸಿದರು.

ಪಾಲಿಬೆಟ್ಟ ಸಮೀಪದ ದುಬಾರೆ ಚೆಟ್ಟಿನಾಡು ಪ್ಲಾಂಟೇಶನ್ ಕಾಫಿ ತೋಟದ ಒಳಗೆ ಕಾಡು ದನದ ಮೇಲೆ ಹುಲಿಯು ಧಾಳಿ ನಡೆಸಿ ಅರ್ಧಭಾಗದಷ್ಟು ತಿಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದರು. ಹುಲಿಯ ಹಾವಳಿಯನ್ನು ತಡೆಗಟ್ಟಲು ಸ್ಥಳೀಯ ಗ್ರಾ.ಪಂ ಸದಸ್ಯರುಗಳು ಹುಲಿಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು. ಇದರಿಂದಾಗಿ ಶುಕ್ರವಾರದಂದು ವೀರಾಜಪೇಟೆ ತಾಲೂಕು ಡಿಸಿಎಫ್ ಚಕ್ರಪಾಣಿ ನೇತೃತ್ವದಲ್ಲಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ಹಾಗೂ ಉಪವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಸೇರಿದಂತೆ ೨೫ಕ್ಕೂ ಅಧಿಕ ಮಂದಿ ಪಾಲಿಬೆಟ್ಟ ಹಾಗೂ ಹೊಸೂರು ಗ್ರಾಮಗಳ ಕಾಫಿ ತೋಟಗಳಲ್ಲಿ ಕೂಂಬಿAಗ್ ನಡೆಸಿದರು.

ಈಗಾಗಲೇ ಹುಲಿಯ ಚಲನ ವಲನಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ಜಾನುವಾರು ಮೃತಪಟ್ಟಿರುವ ಕಾಫಿ ತೋಟದ ಒಳಗೆ ನಾಲ್ಕು ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಗನ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿತ್ತು. ಪಾಲಿಬೆಟ್ಟ, ಮೇಕೂರು ಹೊಸ್ಕೇರಿ, ಹೊಸೂರು ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಬೆಳೆಗಾರರು ಹಾಗೂ ಕಾರ್ಮಿಕರು ಇದೀಗ ಹುಲಿಯ ಹಾವಳಿಯಿಂದ ಭಯಭೀತರಾಗಿದ್ದಾರೆ. ಕಾಫಿ ತೋಟದಲ್ಲಿ ಕಾಣಿಸಿಕೊಂಡು ಜಾನುವಾರುಗಳ ಮೇಲೆ ಧಾಳಿ ನಡೆಸುತ್ತಿರುವ ಹುಲಿಯನ್ನು ಸೆರೆ ಹಿಡಿಯಬೇಕು ಹಾಗೂ ರೈತರಿಗೆ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾನೂನು ಸಲಹೆಗಾರ ಹಾಗೂ ವಕೀಲರಾದ ಕೆ.ಬಿ ಹೇಮಚಂದ್ರ ಒತ್ತಾಯಿಸಿದ್ದಾರೆ.

-ವರದಿ: ವಾಸು ಎ.ಎನ್.