*ಗೋಣಿಕೊಪ್ಪ: ವಿರಾಜಪೇಟೆ ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ತಾಲೂಕು ಮಟ್ಟದ ರೈತ ಫಲಾನುಭವಿಗಳ ಸಮಾವೇಶ ತಾ. ೨೭ರಂದು ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಲಿದೆ ಎಂದು ರಾಜ್ಯ ಕೃಷಿ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ರೈತರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದೆ. ಈ ಮೂಲಕ ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೃಷಿ ಮೋರ್ಚಾಗಳನ್ನು ಸ್ಥಾಪಿಸಿ ಅವುಗಳ ಮೂಲಕವು ರೈತಪರ ಚಟುವಟಿಕೆಗಳನ್ನು ನಡೆಸುತ್ತಿದೆ. ರೈತರು ಸ್ವಾವಲಂಬಿಗಳಾಗಿ ಮತ್ತು ಆರ್ಥಿಕ ಬಲವರ್ಧನೆಗೆ ಸಹಕಾರಿ ಯಾಗುವ ನಿಟ್ಟಿನಲ್ಲಿ ರೈತಪರ ಕಾರ್ಯಕ್ರಮಗಳನ್ನು ರೈತರ ಸಮೀಪಕ್ಕೆ ಕೊಂಡೊಯ್ಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳು ರೈತರಿಗೆ ಯಾವ ರೀತಿಯಲ್ಲಿ ತಲುಪಿದೆ ಮತ್ತು ಅದರ ಸಾಧಕ, ಬಾದಕಗಳ ವಿಚಾರ ವಿನಿಮಯ ರೈತ ಸಮಾವೇಶದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ಮಾತನಾಡಿ ಪ್ರಧಾನಿ ಮೋದಿಯವರ ಆಡಳಿತದಲ್ಲಿ ರೈತರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವ ಕಾರ್ಯಯೋಜನೆಯನ್ನು ರೂಪಿಸಿದ್ದಾರೆ. ವಿನೂತನ ಯೋಜನೆಗಳ ಮೂಲಕ ರೈತರ ಚೇತರಿಕೆಗೆ ಸರ್ಕಾರ ಚಿಂತನೆ ಹರಿಸಿದೆ. ಈ ಹಿನ್ನೆಲೆಯಲ್ಲಿ ನೇರವಾಗಿ ರೈತರಿಗೆ ಅನುಕೂಲಗಳನ್ನು ಒದಗಿಸಿ ಆರ್ಥಿಕ ಸ್ಥಿತಿಯ ಸುಧಾರಣೆಗೆ ಕ್ರಮ ಕೈಗೊಂಡಿದೆ. ಈ ಬಗ್ಗೆ ಫಲಾನುಭವಿ ಯಾದ ರೈತರು ಸರ್ಕಾರದಿಂದ ಸುಲಭ ರೀತಿಯಲ್ಲಿ ಹೊಂದಿಸಿಕೊAಡ ಸವಲತ್ತುಗಳನ್ನು ಮುಕ್ತ ಮನಸ್ಸಿನಿಂದ ಸಾರ್ವಜನಿಕವಾಗಿ ತಿಳಿಯಪಡಿಸುವ ಮೂಲಕ ಸಮಸ್ಯೆಗಳ ಬಗ್ಗೆ ಮತ್ತು ಸವಲತ್ತುಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಸಮಾವೇಶದಿಂದ ನಡೆಯಲಿದೆ.

ಆರ್.ಎಂ.ಸಿ. ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಶಾಸಕ ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್, ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್, ರಾಜ್ಯ ಸಮಿತಿ ಸದಸ್ಯೆ ಯಮುನಾ ಚಂಗಪ್ಪ, ತಾಲೂಕು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಮಾವೇಶ ನಡೆಯಲಿದೆ ಎಂದರು.

ಈ ಸಂದರ್ಭ ತಾಲೂಕು ಪ್ರಧಾನ ಕಾರ್ಯದರ್ಶಿ ತೋರಿರ ವಿನು ಉಪಸ್ಥಿತರಿದ್ದರು.