ಕುಶಾಲನಗರ, ಜೂ. ೨೫: ನೂರು ವರ್ಷ ಪೂರೈಸಿರುವ ಕುಶಾಲನಗರ ನಂ. ೧೨೨ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕುಶಾಲನಗರದಲ್ಲಿ ತಾ. ೨೭ ರಂದು ಶತಮಾನೋತ್ಸವ ಆಚರಿಸಿಕೊಳ್ಳಲಿದೆ.

೨೦೧೯ರಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕಟ್ಟಡವೊಂದು ನಿರ್ಮಾಣಗೊಳ್ಳುವುದರೊಂದಿಗೆ ಜಿಲ್ಲೆಯ ಸಹಕಾರಿ ವ್ಯವಸ್ಥೆಯಲ್ಲಿ ದಾಖಲೆ ನಿರ್ಮಿಸಿದ ಸಂಘ. ಇದೀಗ ಸಂಘದ ಶತಮಾನೋತ್ಸವ ಕಾರ್ಯಕ್ರಮದ ನೆನಪಿಗಾಗಿ ಸದಸ್ಯರಿಗೆ ಉಪಯೋಗವಾಗುವಂತಹ ಬಹುಉಪಯೋಗಿ ಭವನವೊಂದನ್ನು ನಿರ್ಮಾಣ ಮಾಡಲು ನಿರ್ಧಾರ ಕೈಗೊಂಡಿದೆ.

ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲಿ ಅಂದಾಜು ರೂ. ೩ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಂಘದ ಕಟ್ಟಡ ೫ ಅಂತಸ್ತುಗಳನ್ನು ಒಳಗೊಂಡAತೆ ಕಟ್ಟಡದಲ್ಲಿ ಲಿಫ್ಟ್ ಸೌಲಭ್ಯ ಸೇರಿದಂತೆ ಉನ್ನತ ದರ್ಜೆಯ ಸಭಾ ಕೊಠಡಿಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಮಾನದಂಡದAತೆ ಭದ್ರತಾ ಕೊಠಡಿ, ಸಿಸಿ ಟಿವಿ, ವಿಶಾಲವಾದ ಬ್ಯಾಂಕಿAಗ್ ಕೌಂಟರ್, ಗ್ರಾಹಕರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳು ಈ ಕಟ್ಟಡದಲ್ಲಿ ಕಾಣಬಹುದು. ಇದೀಗ ಸಂಘದ ಕಾರ್ಯವ್ಯಾಪ್ತಿಯ ಗುಡ್ಡೆಹೊಸೂರು ಗ್ರಾಮದಲ್ಲಿ ೧೨೦ ಸೆಂಟ್ಸ್ ಜಾಗದಲ್ಲಿ ಅಂದಾಜು ೪ ಕೋಟಿಗೆ ಜಾಗÀ ಖರೀದಿಸಿದೆ. ಈ ಜಾಗದಲ್ಲಿ ೧,೨೦೦ ಆಸನ ಸಾಮರ್ಥ್ಯದ ಒಂದು ಸಭಾ ಭವನ ಸೇರಿದಂತೆ ಸುಸಜ್ಜಿತವಾದ ಕಟ್ಟಡ ಅಂದಾಜು ರೂ. ೧೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ಪ್ರಸಕ್ತ ಸುಮಾರು ೩,೪೦೬ ಸದಸ್ಯರನ್ನು ಒಳಗೊಂಡ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳೆದ ೧೦೦ ವರ್ಷಗಳಿಂದ ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ೧೯೨೧ರಲ್ಲಿ ಪ್ರಾರಂಭವಾದ ಸಂಘ ಮುಳ್ಳುಸೋಗೆಯಲ್ಲಿ ಕಚೇರಿ ಹೊಂದಿತ್ತು ಎಂದು ಮಾಹಿತಿ ಕಲೆಹಾಕಿರುವ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಸಂಘವನ್ನು ನೂತನ ಯೋಜನೆಗಳೊಂದಿಗೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಲಾಭದ ಹಾದಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.

ಕುಶಾಲನಗರ ಪಟ್ಟಣ, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಮಾದಾಪಟ್ಟಣ, ಗೊಂದಿಬಸವನಹಳ್ಳಿ, ಬೊಳ್ಳೂರು, ಗುಡ್ಡೆಹೊಸೂರು, ಬಸವನಹಳ್ಳಿ ತನಕ ಇದೀಗ ಸುಂಟಿಕೊಪ್ಪದ ಕಾರ್ಯವ್ಯಾಪ್ತಿ ಹೊಂದಿರುವ ಸಂಘ ಹಿಂದಿನ ದಿನಗಳಲ್ಲಿ ಹೆಬ್ಬಾಲೆ, ಕಣಿವೆ, ಕೂಡಿಗೆ, ವಾಲ್ನೂರು, ನಂಜರಾಯಪಟ್ಟಣಗಳ ವ್ಯಾಪ್ತಿಯಲ್ಲಿ ಮಾತ್ರ ಸದಸ್ಯತ್ವ ಹೊಂದಿತ್ತು. ೨೦೦೦ದ ನಂತರ ಸಂಘದ ಆಡಳಿತ ಕಚೇರಿ ಸಂಪೂರ್ಣ ಗಣಕೀಕೃತಗೊಂಡಿದ್ದು, ಇದೀಗ ಸಂಘವನ್ನು ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ಮೇಲ್ದರ್ಜೆಗೆ ಏರಿಸಲಾಗಿದೆ.

೧೯೨೧ರಲ್ಲಿ ಮುಳ್ಳುಸೋಗೆಯಲ್ಲಿ ಪ್ರಾರಂಭಗೊAಡ ಸಂಘ ೧೯೪೮ರಲ್ಲಿ ಮುಳ್ಳುಸೋಗೆಯಿಂದ ಆಗಿನ ಪ್ರೆಸರ್‌ಪೇಟೆಯಾದ ಕುಶಾಲನಗರಕ್ಕೆ ಸ್ಥಳಾಂತರಗೊAಡಿತು. ಅಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ದಿ. ಎಸ್.ಎನ್. ರಾಮಶೆಟ್ಟಿ ಮತ್ತಿತರ ಹಿರಿಯರ ಆಡಳಿತ ಮಂಡಳಿ ಅಂದಾಜು ೨೨ ಸಾವಿರ ಪಾಲು ಬಂಡವಾಳದೊAದಿಗೆ ರೂ. ೧೦ ಸಾವಿರ ಠೇವಣಿ ಕ್ರೋಢೀಕರಿಸಿ ಸಂಘಕ್ಕೆ ಚಾಲನೆ ನೀಡಿರುವುದು ದಾಖಲೆ ಮೂಲಕ ಕಾಣಬಹುದು.

೧೯೮೩-೮೪ರಲ್ಲಿ ಅಂದಿನ ರಾಜ್ಯ ಸರಕಾರ ಸಾಲ ಮನ್ನಾ ಯೋಜನೆಯಲ್ಲಿ ಸದಸ್ಯರು ಸಂಘದಿAದ ಪಡೆದಿದ್ದ ೬ ಲಕ್ಷಕ್ಕೂ ಹೆಚ್ಚಿನ ಸಾಲವನ್ನು ಮನ್ನಾ ಮಾಡಿ ಸಂಘವನ್ನು ಪುನಶ್ಚೇತನಗೊಳಿಸಲು ಬಹುದೊಡ್ಡ ಕೊಡುಗೆ ನೀಡಿದೆ ಎಂದರೆ ತಪ್ಪಾಗಲಾರದು. ೧೯೮೫ರಲ್ಲಿ ಆಗಿನ ಅಧ್ಯಕ್ಷರಾಗಿದ್ದ ವಕೀಲ ಟಿ.ಎಸ್. ನೇಮಿರಾಜು ಮತ್ತು ಆಡಳಿತ ಮಂಡಳಿ ಸಂಘಕ್ಕೆ ಜಾಗವನ್ನು ಪಡೆಯುವುದರೊಂದಿಗೆ ೮೭ರಲ್ಲಿ ನೂತನ ಕಟ್ಟಡ ಕೂಡ ಲೋಕಾರ್ಪಣೆಗೊಂಡಿತು. ೧೯೯೯ ರಿಂದ ಸಂಘದ ಅಧ್ಯಕ್ಷರಾದ ಟಿ.ಆರ್. ಶರವಣಕುಮಾರ್ ಮತ್ತು ಆಡಳಿತ ಮಂಡಳಿ ಬ್ಯಾಂಕಿನ ಸದಸ್ಯರುಗಳಿಗೆ ತ್ವರಿತ ಸೇವೆ ಒದಗಿಸುವ ಉದ್ದೇಶದೊಂದಿಗೆ ಸಂಘದ ವ್ಯವಹಾರವನ್ನು ಸಂಪೂರ್ಣ ಗಣಕೀಕರಣಗೊಳಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಹಿವಾಟು ನಡೆಸುವುದರೊಂದಿಗೆ ಅಧಿಕ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಹೆಚ್ಚಿನ ಮೊತ್ತದ ಡಿವಿಡೆಂಟ್ ಕೂಡ ನೀಡಲು ಸಾಧ್ಯವಾಗುತ್ತಿದೆ.

ಕಡು ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವಲ್ಲಿ ವಿದ್ಯಾರ್ಥಿ ವೇತನ ಯೋಜನೆ, ಸಾಲ ಪಡೆದ ಸದಸ್ಯರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಹೊರೆಯಾಗದಂತೆ ಸಾಲದ ಹೊಂದಾಣಿಕೆಗೆ ಪ್ರತ್ಯೇಕ ನಿಧಿ ಸ್ಥಾಪನೆಗೆ ಕೂಡ ಸಂಘ ಚಿಂತನೆ ಹರಿಸಿದೆ. ಇತ್ತೀಚಿನ ದಿನಗಳಲ್ಲಿ ಕುಶಾಲನಗರ ಪಟ್ಟಣವಾಗಿ ಮಾರ್ಪಾಡಾಗುವುದರೊಂದಿಗೆ ಸಂಘದಲ್ಲಿ ರೈತ ಸದಸ್ಯರ ಸಂಖ್ಯೆ ವಿರಳವಾಗುತ್ತಿದೆ. ರೂ. ೨.೬೪ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ತಂತ್ರಜ್ಞಾನದ ಕಟ್ಟಡದಲ್ಲಿ ಆಡಳಿತ ಮಂಡಳಿ ಸಿಬ್ಬಂದಿಗಳಿಗೆ ಹಾಗೂ ಸದಸ್ಯರುಗಳಿಗೆ ಪೀಠೋಪಕರಣ, ನೂತನ ಕಂಪ್ಯೂಟರ್ ಅಳವಡಿಕೆ, ಲಿಫ್ಟ್ ಸೌಲಭ್ಯ, ಹವಾ ನಿಯಂತ್ರಣ ವ್ಯವಸ್ಥೆ, ಭಾರತೀಯ ರಿಸರ್ವ್ ಬ್ಯಾಂಕಿನ ಮಾನದಂಡದAತೆ ಸೂಕ್ತ ಭದ್ರತಾ ಕೊಠಡಿ ಅಲ್ಲದೆ, ನೂತನ ತಂತ್ರಜ್ಞಾನದ ರಕ್ಷಣಾ ವ್ಯವಸ್ಥೆಕೂಡ ಪ್ರಸಕ್ತ ಕಟ್ಟಡ ಒಳಗೊಂಡಿದೆ. ಹಳೆಯ ಕಟ್ಟಡದ ವಾರ್ಷಿಕ ಲಕ್ಷಗಟ್ಟಲೆ ಬಾಡಿಗೆ ಆದಾಯ ಹಾಗೂ ನೂತನ ಕಟ್ಟಡದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುವುದು ಎಂದು ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ.

ಲಾಭ ಗಳಿಕೆಯಲ್ಲಿ ಜಿಲ್ಲೆಯ ಕೆಲವೇ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಕುಶಾಲನಗರ ಸಂಘ ಸೇರಿಕೊಂಡಿದೆ ಎನ್ನುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ. ಸಂಘದಲ್ಲಿ ಇತ್ತೀಚಿನ ವರ್ಷಗಳಿಂದ ಪ್ರತಿ ತಿಂಗಳು ಆಂತರಿಕ ಲೆಕ್ಕ ಪರಿಶೋಧನಾ ವ್ಯವಸ್ಥೆ ಕೂಡ ನಡೆಸುವುದರೊಂದಿಗೆ ೩ ತಿಂಗಳಿಗೊಮ್ಮೆ ವರದಿ ಕೂಡ ಸಲ್ಲಿಕೆ ಮಾಡಲಾಗುತ್ತಿದೆ. ರೈತರಿಗೆ ಸಂಘದ ಸಾಲ ಪಡೆಯುವುದು ಹಾಗೂ ಸಾಲ ವಸೂಲಾತಿ ಬಗ್ಗೆ ಮಾಹಿತಿ ನೀಡುವ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಹಿರಿಯ ಸಹಕಾರಿಗಳಿಂದ ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸದಸ್ಯರ ಆರೋಗ್ಯ ಕಾಪಾಡಲು ವಿವಿಧ ನಿಧಿಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರನ್ನು ಹೆಚ್ಚಿಸುವುದು, ಸದಸ್ಯರುಗಳಿಗೆ ಹೆಚ್ಚಿನ ಮೊತ್ತದ ಸಾಲದ ಅನುಕೂಲತೆ ಕಲ್ಪಿಸುವುದು, ಸಾಲ ವಸೂಲಾತಿಗೆ ಸೂಕ್ತ ಕ್ರಮ ಕೈಗೊಳ್ಳುವುದು, ಇದರೊಂದಿಗೆ ಸಂಘದ ಸದಸ್ಯರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಚಿಂತಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶರವಣಕುಮಾರ್ ತಿಳಿಸಿದ್ದಾರೆ.

೨೦೨೨ಕ್ಕೆ ಸಂಘದ ಶತಮಾನೋತ್ಸವ ಸಂದರ್ಭ ಸಂಘದ ಎಲ್ಲಾ ಹಿರಿಯ ಹಾಗೂ ಮಾಜಿ ಅಧ್ಯಕ್ಷರುಗಳನ್ನು ಸ್ಮರಿಸುವ ಕಾರ್ಯಕ್ರಮದೊಂದಿಗೆ ಗೌರವ ಸಲ್ಲಿಸಲಾಗುವುದು. ಸಂಘದ ಕಾರ್ಯವ್ಯಾಪ್ತಿಯನ್ನು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿಸಿ ಬ್ಯಾಂಕ್‌ನ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿರುವ ಶರವಣಕುಮಾರ್, ಶತಮಾನೋತ್ಸವ ಭವನ ನಿರ್ಮಾಣಕ್ಕೆ ಸೂಕ್ತ ಯೋಜನೆಯ ಪರಿಕಲ್ಪನೆ ಹಮ್ಮಿಕೊಳ್ಳಲಾಗಿದೆ. ಈ ಭವನದಲ್ಲಿ ಪ್ರತ್ಯೇಕ ಸಸ್ಯಹಾರಿ ಅಡುಗೆ ಕೋಣೆ, ಊಟದ ಹಾಲ್, ಪ್ರತ್ಯೇಕ ಮಾಂಸಹಾರಿ ಅಡುಗೆ ಕೋಣೆ ಹೀಗೆ ಸಸುಜ್ಜಿತ ಭವನ ಇನ್ನೂ ಕೆಲವೇ ಸಮಯದಲ್ಲಿ ತಲೆಎತ್ತಲಿದೆ ಎಂದಿದ್ದಾರೆ. ಈ ಸಂಬAಧ ನೀಲಿನಕ್ಷೆ ಸಿದ್ಧಗೊಂಡಿದೆ ಎಂದು ತಿಳಿಸಿದ್ದಾರೆ.

ಆಡಳಿತ ಮಂಡಳಿ ಹಾಗೂ ಸದಸ್ಯರ ಸಹಕಾರದೊಂದಿಗೆ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಾಜ್ಯದ ಇತರ ಸಂಘಗಳಿಗೆ ಮಾದರಿಯಾಗಿದೆ ಎಂದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಒಟ್ಟು ಸಂಗ್ರಹಣೆ ಮಾಡಿರುವ ಠೇವಣಿಗಳು ೧೦೧,೮೪,೪೯,೧೨೭ ರೂ ಗಳು. ಒಟ್ಟು ವಿತರಿಸಿದ ಸಾಲಗಳು ರೂ. ೪೦,೮೭,೩೦,೭೪೫ ಟಿ.ಆರ್. ಶರವಣಕುಮಾರ್ ೧೯೯೩ರಲ್ಲಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದು ೧೯೯೯ರಿಂದ ೨೦೦೫ರ ತನಕ ೬ ವರ್ಷಗಳ ಕಾಲ ಅಧ್ಯಕ್ಷರಾಗಿ ಸಂಘದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ನಂತರ ೨೦೧೫ ರಿಂದ ಮತ್ತೆ ಅಧ್ಯಕ್ಷರಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿ.ಆರ್. ಶರವಣಕುಮಾರ್ ಸಂಘವನ್ನು ಸಂಪೂರ್ಣ ಕಂಪ್ಯೂಟರೀಕರಣಗೊಳಿಸುವುದರೊAದಿಗೆ ಸಂಘಕ್ಕೆ ಸ್ವಂತ ಬಂಡವಾಳ ಸಂಗ್ರಹಿಸಲು ಪ್ರಯತ್ನ ನಡೆಸಿದ್ದಾರೆ. ಸಂಘ ಲಾಭದ ಹಾದಿಗೆ ಕೊಂಡೊಯ್ಯುವಲ್ಲಿ ನಿರಂತರ ಶ್ರಮದೊಂದಿಗೆ ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಉಪಾಧ್ಯಕ್ಷರಾಗಿ ವಿ.ಎಸ್ ಆನಂದಕುಮಾರ್, ನಿರ್ದೇಶಕರುಗಳಾಗಿ ಪಿ.ಬಿ. ಯತೀಶ್, ಪಿ. ಕಾರ್ತಿಶನ್, ಎಂ.ಕೆ. ಗಣೇಶ್, ಬಿ.ಎ. ಅಬ್ದುಲ್ ಖಾದರ್, ಹೆಚ್.ಎಂ. ಮಧುಸೂದನ್. ಜಿ.ಪಿ. ಮಧುಕುಮಾರ್, ಡಿ.ವಿ. ರಾಜೇಶ್, ಬಿ. ರಾಮಕೃಷÀ್ಣಯ್ಯ, ಜಗದೀಶ್, ಕವಿತ ಮೋಹನ್, ನೇತ್ರಾವತಿ ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬಿ.ಬಿ. ಲೋಕೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಒಟ್ಟು ೮ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸಕ್ತ ಸಂಘ ೧೦೦ ವರ್ಷ ಪೂರೈಸಿದ್ದು ಕಳೆದ ೫ ವರ್ಷಗಳಿಂದ ಸತತವಾಗಿ ಕೋಟಿಗೂ ಹೆಚ್ಚು ಲಾಭಗಳಿಸಿರುವ ಕೊಡಗಿನ ಹೆಬ್ಬಾಗಿಲಿನ ಕುಶಾಲನಗರದ ಹೆಮ್ಮೆಯ ಹೆಗ್ಗುರುತಾಗಿದೆ.

- ಎಂ.ಎನ್. ಚಂದ್ರಮೋಹನ್