ಚೆಟ್ಟಳ್ಳಿ, ಜೂ. ೨೨: ಮಳೆಗಾಲದ ಬಿಳಿನೊರೆಯ ಹಿನ್ನೀರ ನಡುವೆ ಅತ್ಯಂತ ರೋಮಾಂಚಕಾರಿ ಬರಪೊಳೆಯ ವೈಟ್ ವಾಟರ್ ರ‍್ಯಾಫ್ಟಿಂಗ್‌ಗೆ ಸರಕಾರದ ಅನುಮತಿ ಇದ್ದರೂ ಜೂನ್‌ನಲ್ಲಿ ಪ್ರಾರಂಭವಾಗಬೇಕಿದ್ದ ಜಡಿಮಳೆ ಆಗಮಿಸದಿರುವುದು ಜಲ ಕ್ರೀಡೆ ಆಯೋಜನೆಗೆ ಕುಂಠಿತವಾಗಿದೆ.

ಹಸಿರ ಹೊದಿಕೆಯ ಕಾಡು ನದಿಗೆ ಬಾಗಿರುವ ವಾಟೆ ಬಿದುರುಗಳು, ಕುರುಚಲು ಕಾಡುಗಳ ನಡುವೆ ಬಂಡೆ ಕಲ್ಲುಗಳ ನಡುವೆ ಮಳೆಗಾಲದ ರಭಸಕ್ಕೆ ಹಾಲ್ನೊರೆಯಂತೆ ದುಮುಕುವ ಆತ್ಯಾಕರ್ಷಣೀಯ ಸ್ಥಳವೇ ಈ ಬರಪೊಳೆ (ಕಕ್ಕಟುಹೊಳೆ). ಇಲ್ಲಿ ಪ್ರತಿವರ್ಷ ಜೂನ್ ತಿಂಗಳಲ್ಲಿ ಮಳೆಯಾಗುತ್ತಿದ್ದಂತೆ ಪ್ರಾರಂಭವಾಗುವ ರ‍್ಯಾಫ್ಟಿಂಗ್ ಸೆಪ್ಟ್ಟೆಂಬರ್‌ವರೆಗೆ ಮುಂದುವರಿಯುತ್ತದೆ.

ಈ ಬಾರಿ ಮೂರು ಸಂಸ್ಥೆಗಳ ಆಯೋಜಕರು ಬರಪೊಳೆಯಲ್ಲಿ ವೈಟ್ ವಾಟರ್ ರ‍್ಯಾಫ್ಟಿಂಗ್ ನಡೆಸಲು ಸಂಬAಧಪಟ್ಟ ಎಲ್ಲಾ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಅನುಮತಿಗಾಗಿ ಕಾರವಾರ, ಹೊನ್ನಾವರ, ಬೆಂಗಳೂರಿನಿAದ ಹಿಡಿದು ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಜಿಲ್ಲಾಡಳಿತದವರೆಗೆ ಅನುಮತಿಗಾಗಿ ಆಯೋಜಕರು ಲಕ್ಷಾನುಗಟ್ಟಲೆ ಹಣ ವ್ಯಯಿಸುತ್ತಿದ್ದರು. ಈ ಬಾರಿ ಈ ಹಿಂದೆ ಅನುಮತಿ ಪಡೆೆದವರಿಗೆ ಬರೀ ನವೀಕರಣ ನೀಡಲಿದೆಯಾದರೂ ದಾಖಲಾತಿಗಳ ಪರಿಶೀಲನೆ, ರ‍್ಯಾಫ್ಟ್ಗಳ ಗುಣಮಟ್ಟ ಹಾಗೂ ಗೈಡ್ ಸಾಮರ್ಥ್ಯದ ಬಗ್ಗೆ ರ‍್ಯಾಫ್ಟಿಂಗ್ ಸ್ಥಳದಲ್ಲೇ ಪರಿಶೀಲನೆಗಾಗಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ(ಜೇತ್ನಾ)ಯನ್ನು ನೇಮಿಸಲಾಗಿದೆ. ಇವರ ವರದಿ ಆಧÀರಿಸಿ ಜಿಲ್ಲಾಡಳಿತ ಜಲ ಕ್ರೀಡೆಗೆ ಅನುಮತಿ ನೀಡಲಿದೆ.

೨೦೧೯ರಲ್ಲಿ ಕೇವಲ ಎರಡು ತಿಂಗಳು ಜಲ ಕ್ರೀಡೆ ನಡೆಸಲು ಸಾಧ್ಯವಾಗಿದ್ದು, ನಂತರದ ವರ್ಷಗಳಲ್ಲಿ ಕೊರೊನಾ ಹಿನ್ನೆಲೆ ಬರಪೊಳೆಯಲ್ಲಿ ವೈಟ್ ವಾಟರ್ ರ‍್ಯಾಫ್ಟಿಂಗ್ ನಡೆಸಲು ಸಾಧ್ಯವಾಗಲಿಲ್ಲ. ಜೊತೆಗೆ ಆಯೋಜಕರ ರ‍್ಯಾಫ್ಟಿಂಗ್ ಸಾಮಗ್ರಿಗಳು ಹಾಳಾಗಿದ್ದವು. ಈ ಬಾರಿ ರ‍್ಯಾಫ್ಟಿಂಗ್ ಸಾಮಗ್ರಿಗಳನ್ನು ಖರೀದಿಸಲು ಹೆಚ್ಚಿನ ವೆಚ್ಚ ತಗುಲಲಿದ್ದು, ನುರಿತ ಗೈಡ್‌ಗಳನ್ನು ಋಷಿಕೇಶದಿಂದ ಕರೆಸಲಾಗುತ್ತಿದೆ ಎನ್ನುತ್ತಾರೆ ಆಯೋಜಕರು. ಮಳೆ ತಡವಾದ ಹಿನ್ನೆಲೆ ಜಲ ಕ್ರೀಡೆ ಆಯೋಜನೆಗೆ ತಡವಾಗಲಿದೆ. - ಪುತ್ತರಿರ ಕರುಣ್ ಕಾಳಯ್ಯ