ಸಿದ್ದಾಪುರ, ಜೂ ೨೨: ನೆಲ್ಲಿಹುದಿಕೇರಿ ಗ್ರಾಮದ ಪಂಚಾಯಿತಿ ಸಭಾಂಗಣದಲ್ಲಿ ವಿದ್ಯುತ್ ಅದಾಲತ್ ಸಭೆಯು ಚೆಸ್ಕಾಂ ನಿಗಮದ ಅಧಿಕಾರಿ ರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಬೆಟ್ಟದಕಾಡು ನಿವಾಸಿಗಳಾದ ಮೇದಪ್ಪ ಹಾಗೂ ಚಂಗಪ್ಪ ಮಾತನಾಡಿ, ಕಾಫಿ ತೋಟಗಳಲ್ಲಿ ವಿದ್ಯುತ್ ತಂತಿಗಳು ಮರಗಳ ಮಧ್ಯಭಾಗದ ಮೂಲಕ ಹಾದುಹೋಗಿರುತ್ತದೆ. ಇದರಿಂದಾಗಿ ಮರಗಳ ಕೊಂಬೆಗಳನ್ನು ಕಡಿಯಲು ಹಾಗೂ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಸಮಸ್ಯೆಯಾಗುತ್ತಿದೆ ಎಂದರು. ತೋಟಗಳ ಒಳಗೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದರು.

ನೆಲ್ಲಿಹುದಿಕೇರಿ ಕುಂಬಾರಗುAಡಿ ನಿವಾಸಿಗಳು ಮಾತನಾಡಿ, ರಸ್ತೆ ಬದಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಇದ್ದು, ಇದರಿಂದಾಗಿ ಸಮಸ್ಯೆ ಯಾಗುತ್ತಿದೆ. ಟ್ರಾನ್ಸ್ಫಾರ್ಮರ್ ಸ್ಥಳಾಂತರ ಮಾಡಿಕೊಡುವಂತೆ ಮನವಿ ಮಾಡಿದರು. ಶಾಲೆ ರಸ್ತೆಯ ನಾಲ್ಕನೇ ವಾರ್ಡ್ನ ಕೆಲವು ಜಾಗಗಳಲ್ಲಿ ವೋಲ್ಟೇಜ್ ಕಡಿಮೆಯಾಗಿ ಬರುತ್ತಿದ್ದು ಸರಿಪಡಿಸಿಕೊಡುವಂತೆ ನಿವಾಸಿಗಳು ಹೇಳಿದರು.

ಜೆ.ಡಿ.ಎಸ್. ಯುವ ಘಟಕದ ಪದಾಧಿಕಾರಿಗಳಾದ ಶಿಯಾಬ್ ಹಾಗೂ ಶರತ್ ಮಾತನಾಡಿ, ವಿದ್ಯುತ್ ಶಾಖಾಧಿಕಾರಿ ಕಚೇರಿಯನ್ನು ಚೆಟ್ಟಳ್ಳಿಯಿಂದ ನೆಲ್ಲಿಹುದಿಕೇರಿ ಗ್ರಾಮಕ್ಕೆ ಸ್ಥಳಾಂತರ ಮಾಡಬೇಕು. ನೆಲ್ಲಿಹುದಿಕೇರಿ ಗ್ರಾಮದಲ್ಲಿ ಹೆಚ್ಚು ಜನಸಂಖ್ಯೆ ಇದ್ದು, ಬಹುತೇಕ ಕೂಲಿ ಕಾರ್ಮಿಕರಾಗಿದ್ದಾರೆ. ಶಾಖಾ ಕಚೇರಿಯನ್ನು ನೆಲ್ಯಹುದಿಕೇರಿ ಯಲ್ಲಿ ತೆರೆಯಬೇಕೆಂದು ಮನವಿಪತ್ರ ನೀಡಿದರು. ಈ ಸಂದರ್ಭದಲ್ಲಿ ಚೆಸ್ಕಾಂ ನಿಗಮದ ಶಾಖಾಧಿಕಾರಿ ಪ್ರತಾಪ್ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಗ್ರಾ.ಪಂ ಪಿ.ಡಿ.ಓ. ಅನಿಲ್ ಕುಮಾರ್, ಲೈನ್‌ಮ್ಯಾನ್ ನಾಗರಾಜು ಹಾಗೂ ಸ್ಥಳೀಯ ಗ್ರಾ.ಪಂ. ಸದಸ್ಯರು ಹಾಜರಿದ್ದರು.