ಶನಿವಾರಸಂತೆ, ಜೂ. ೨೨: ವಿದ್ಯುತ್ ಇಲಾಖೆ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಲು ಪ್ರತಿ ತಿಂಗಳ ೩ನೇ ಶನಿವಾರ ಗಡಿ ಭಾಗದ ಗ್ರಾಮಗಳಲ್ಲಿ ಅದಾಲತ್ ಏರ್ಪಡಿಸಲು ನಿರ್ದೇಶಿಸಿದೆ ಎಂದು ಸೋಮವಾರಪೇಟೆ ತಾಲೂಕು ಸಹಾಯಕ ಕಾರ್ಯಪಾಲಕ ಅಭಿಯಂತರ ಧನಂಜಯ್ ಹೇಳಿದರು. ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಾಂತಪುರ-ದೊಡ್ಡಕೊಡ್ಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿದ್ಯುತ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ಗ್ರಾಹಕರಿಂದ ಅರ್ಜಿ ಸ್ವೀಕರಿಸಿ ಮಾತನಾಡಿದರು.

ಕೊಡ್ಲಿಪೇಟೆ ಹೋಬಳಿಗೆ ಶನಿವಾರಸಂತೆ ಮತ್ತು ಯಸಳೂರು ಘಟಕದಿಂದ ವಿದ್ಯುತ್ ಸರಬರಾಜಾಗುತ್ತಿದ್ದು, ಈ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿದೆ. ಆದ್ದರಿಂದ ಹೊಸಳ್ಳಿ ಗ್ರಾಮದಲ್ಲಿ ವಿದ್ಯುತ್ ವಿತರಣಾ ಘಟಕ ನಿರ್ಮಿಸಲು ಜಿಲ್ಲಾಧಿಕಾರಿಯವರು ಜಾಗ ಮಂಜೂರು ಮಾಡಿದ್ದು, ಇಲಾಖೆ ಹೆಸರಿಗೆ ಪಹಣಿ ಆಗಿದೆ. ಶೀಘ್ರದಲ್ಲೇ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಸಮಸ್ಯೆ ಬಗೆಹರಿಯಲಿದ್ದು, ಗ್ರಾಹಕರು ಕಡ್ಡಾಯವಾಗಿ ಪ್ರತಿ ತಿಂಗಳಿಗೊಮ್ಮೆ ವಿದ್ಯುತ್ ಬಿಲ್ ಪಾವತಿಸಿ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಗ್ರಾಮ ಮುಖಂಡರು, ಕೃಷಿಕರು ಸಮಸ್ಯೆಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ವಿದ್ಯುತ್ ಇಲಾಖೆ ಅಧಿಕಾರಿಗಳಾದ ಗುಣಶೇಖರ್, ದೀಪಕ್, ಕೊಡ್ಲಿಪೇಟೆ ಉಪ ವಿಭಾಗದ ಕಿರಿಯ ಅಭಿಯಂತರ ಹಿರೇಮಠ್, ಸಿಬ್ಬಂದಿ ಲೋಕೇಶ್, ಯಶ್ವಂತ್, ಮುದ್ದೇಶ್, ರಂಗಸ್ವಾಮಿ, ಮಹೇಶ್, ದರ್ಶನ್ ಉಪಸ್ಥಿತರಿದ್ದರು.