ಕಣಿವೆ, ಜೂ. ೨೧: ಹಾರಂಗಿ ಹಾಗೂ ಕಾವೇರಿ ಪವಿತ್ರ ನದಿಗಳು ಸಂಗಮಗೊAಡಿರುವ ಪ್ರಸಿದ್ಧ ತಾಣ ಕೂಡಿಗೆಯಲ್ಲಿರುವ ಕ್ರೀಡಾಂಗಣ ಅಭಿವೃದ್ಧಿಗಾಗಿ ಕಾಯುತ್ತಿದೆ.

ಕೂಡಿಗೆಯ ಸರ್ಕಾರಿ ಕೃಷಿ ಫಾರಂ ಒಳಗಿನ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಹಾಗೂ ಸರ್ಕಾರಿ ಪಿಯು ಕಾಲೇಜಿಗೆ ಹೊಂದಿಕೊAಡಿರುವ ಸುಮಾರು ಎಂಟು ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿರುವ ಈ ಕ್ರೀಡಾಂಗಣವನ್ನು ಸಂರಕ್ಷಿಸಿ ಸುತ್ತಲು ಗ್ಯಾಲರಿಯನ್ನು ನಿರ್ಮಿಸಿ ಆಧುನಿಕವಾದ ಹೊರಾಂಗಣ ಹಾಗೂ ಓಳಾಂಗಣ ಕ್ರೀಡಾಂಗಣವಾಗಿ ರೂಪಿಸುವ ಅಗತ್ಯ ಇದೆ.

ಕೊಡಗು ಜಿಲ್ಲೆಯ ಮಟ್ಟಿಗೆ ಹೆಚ್ಚು ನಾಗಾಲೋಟದಲ್ಲಿ ಬೆಳೆಯುತ್ತಿರುವ ಕುಶಾಲನಗರ ತಾಲೂಕಿನ ಸೆರಗಿನಲ್ಲಿರುವ ಈ ಕೂಡಿಗೆಯ ವಿಶಾಲ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿದರೆ ಭವಿಷ್ಯದಲ್ಲಿ ಹೆಚ್ಚಿನ ಪ್ರಯೋಜನಕ್ಕೆ ಬರುತ್ತದೆ ಎಂಬುದು ಸ್ಥಳೀಯರ ಆಗ್ರಹ.

ಇಷ್ಟೊಂದು ವಿಶಾಲವಾದ ಸುಸಜ್ಜಿತ ಸ್ಥಳ ಕುಶಾಲನಗರ ತಾಲೂಕಿನ ಆಸು ಪಾಸಿನಲ್ಲಿ ಎಲ್ಲಿಯೂ ಕೂಡ ಇಲ್ಲ. ಹಾಗಾಗಿ ಭವಿಷ್ಯದಲ್ಲಿ ಯುವ ಜನ ಮೇಳ ಸಂಘಟಿಸಲು, ರಾಜಕೀಯ ಸಮಾರಂಭಗಳಿಗೆ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಈ ಜಾಗ ಮಹತ್ವ ಪಡೆದುಕೊಳ್ಳಲಿದೆ.

ರಾತ್ರಿ ಬೆಳಕಿನ ವ್ಯವಸ್ಥೆ ಆಗಬೇಕಿದೆ

ಅಭಿವೃದ್ಧಿಯಾಗದ ಈ ಕ್ರೀಡಾಂಗಣವನ್ನು ಕೂಡಿಗೆ ಸುತ್ತಮುತ್ತಲಿನ ನೂರಾರು ಮಕ್ಕಳು ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಮೊದಲಾದ ಆಟಗಳಿಗೆ ಬಳಸುತ್ತಿದ್ದಾರೆ. ಅಷ್ಟೇ ಅಲ್ಲ ಬೆಳಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕಾಗಿ ಇಲ್ಲಿನ ನೂರಾರು ಮಂದಿ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಈ ಕ್ರೀಡಾಂಗಣವನ್ನು ಆಶ್ರಯಿಸಿದ್ದಾರೆ.

ಆದರೆ ಈಗ ಇರುವ ಕ್ರೀಡಾಂಗಣ ಸ್ವಚ್ಛವಾಗಿಲ್ಲದ ಕಾರಣ ಮುಳ್ಳು ಗಿಡಗಳು, ಪಾರ್ಥೇನಿಯಂನAತಹ ಕಾಡು ಗಿಡಗಳು ಬೆಳೆದು ಕ್ರೀಡಾಂಗಣ ಕಾಡು ಹೊಲದಂತಾಗಿದೆ.

ಜೊತೆಗೆ ಈ ಕ್ರೀಡಾಂಗಣದ ಸುತ್ತಲೂ ಸ್ಥಳೀಯ ಪಂಚಾಯಿತಿ ಆಡಳಿತ ಕನಿಷ್ಟ ರಾತ್ರಿ ದೀಪಗಳ ವ್ಯವಸ್ಥೆಯನ್ನಾದರೂ ಮಾಡಬೇಕು ಎಂಬುದು ವಾಯುವಿಹಾರಿಗಳ ಕೋರಿಕೆಯಾಗಿದೆ.

ಹಲವು ಇಲಾಖೆಗಳ ಸಂಗಮವಿದು

ಕೂಡಿಗೆಯ ಕ್ರೀಡಾಂಗಣ ಇರುವ ಈ ಪ್ರದೇಶದಲ್ಲಿ ಜಿಲ್ಲೆಗೆ ಕಳಶ ಪ್ರಾಯವಾದ ಹೆಮ್ಮೆಯ ಸೈನಿಕ ಶಾಲೆಯಿದೆ. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಕನಸಿನ ಸರ್ಕಾರಿ ಕ್ರೀಡಾ ಶಾಲೆಯಿದು.

ಸಹಸ್ರ ಸಂಖ್ಯೆಯಲ್ಲಿ ಶಿಕ್ಷಕರನ್ನು ತಯಾರಿಸಿದಂತಹ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಇದೆ. ರೈತರ ಜೀವನಾಡಿ ಕೃಷಿ ಇಲಾಖೆ, ಮಣ್ಣು ಪರೀಕ್ಷಾ ಕೇಂದ್ರವಿದೆ. ಉತ್ತಮ ಫಲಿತಾಂಶದ ಜೊತೆಗೆ ಜಿಲ್ಲೆಯ ಖಾಸಗಿ ಕಾಲೇಜುಗಳು ಕೂಡ ನಾಚುವಂತಹ ಮಾದರಿಯಲ್ಲಿ ರೂಪುಗೊಂಡಿರುವ ಸರ್ಕಾರಿ ಪಿಯು ಕಾಲೇಜು ಸೇರಿದಂತೆ ಇನ್ನಿತರೇ ಸರ್ಕಾರಿ ಇಲಾಖೆಗಳು ಹಾಗೂ ವಸತಿ ಗೃಹಗಳು ಇರುವ ಇಲ್ಲಿ ಕೂಡಿಗೆ ಮುಖ್ಯ ರಸ್ತೆಯಿಂದ ಕ್ರೀಡಾಂಗಣದವರೆಗೂ ರಾತ್ರಿ ಹೊತ್ತು ಬೆಳಕು ಚೆಲ್ಲುವ ಸಾಲು ದೀಪಗಳ ವ್ಯವಸ್ಥೆ ಅತೀ ಜರೂರಾಗಿ ಆಗಬೇಕಿದೆ. ಕ್ಷೇತ್ರದ ಶಾಸಕರು ತಮ್ಮ ವಿಶೇಷ ಪ್ರಯತ್ನದಿಂದ ಈ ಕೂಡಿಗೆಯ ಕ್ರೀಡಾಂಗಣಕ್ಕೆ ಮಹತ್ವ ಕಲ್ಪಿಸಿ ವಿಶೇಷ ಅನುದಾನ ತಂದು ಅಭಿವೃದ್ಧಿಪಡಿಸಲಿ ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.

- ಕೆ.ಎಸ್. ಮೂರ್ತಿ, ಕುಶಾಲನಗರ.