ಮುಳ್ಳೂರು, ಜೂ. ೨೧: ರೋಟರಿ ಸಂಸ್ಥೆ ಸಮಾಜ ಕಾರ್ಯದ ಜೊತೆಯಲ್ಲಿ ಸ್ವಚ್ಛತೆ, ಪರಿಸರ, ಆರೋಗ್ಯ, ಶಿಕ್ಷಣ ಮುಂತಾದ ದೇಶದ ಸರ್ವೋತೋಮುಖ ಪ್ರಗತಿಗಾಗಿ ಶ್ರಮಿಸುತ್ತಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ಅಭಿಪ್ರಾಯಪಟ್ಟರು. ಅವರು ಆಲೂರು-ಸಿದ್ದಾಪುರ ಮಲ್ಲೇಶ್ವರ ರೋಟರಿ ಕ್ಲಬ್ ವಾರ್ಷಿಕೋತ್ಸವ ಮತ್ತು ಸಾಧಕರು ಹಾಗೂ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿ ಸಂಸ್ಥೆ ವಿಶ್ವದ ಅತಿ ದೊಡ್ಡದಾದ ಸೇವಾ ಸಂಸ್ಥೆಯಾಗಿದ್ದು ೧೬ ಲಕ್ಷಕಿಂತ ಹೆಚ್ಚು ರೋಟರಿ ಸದಸ್ಯರು ಸಮಾಜ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ರೋಟರಿ ಸಂಸ್ಥೆ ಕೊರೊನಾ ಪಿಡುಗು ನಿರ್ಹಹಣೆಗೆ ೧೩೦ ಕೋಟಿ ಅನುದಾನ ನೀಡಿದೆ. ಕೊಡಗಿನಲ್ಲಿ ಜಲ ಪ್ರಳಯ ಆದ ಸಂದರ್ಭ ರೂ. ೩ ಕೋಟಿ ಅನುದಾನ ಕೊಟ್ಟಿತ್ತು. ಈ ಮೂಲಕ ರೋಟರಿ ಸಂಸ್ಥೆ ಆರೋಗ್ಯ, ಸ್ವಚ್ಛತೆ, ಶಿಕ್ಷಣ, ಅರಣ್ಯ, ಪರಿಸರ ಮುಂತಾದ ಪ್ರಗತಿಗೆ ಸರಕಾರದ ಜೊತೆ ಕೈಜೋಡಿಸುತ್ತಿದೆ ಎಂದರು.

ಸಹಾಯಕ ರಾಜ್ಯಪಾಲ ಎಚ್.ಟಿ. ಅನಿಲ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೋಟರಿ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ೧೪ ರೋಟರಿ ಕ್ಲಬ್ ಶಾಖೆಗಳಿದ್ದು ಅತ್ಯುತ್ತಮವಾಗಿ ಕಾರ್ಯವಿರ್ಹಹಿಸುತ್ತಿದ್ದು ೨ ಸಾವಿರ ಮಂದಿ ರೋಟರಿ ಸದಸ್ಯರು ಸಮಾಜ ಸೇವೆ ಮಾಡುತ್ತಿರುವ ಮೂಲಕ ಮಾದರಿಯಾಗಿದೆ ಎಂದರು.

ರೋಟರಿ ವಲಯ ಕಾರ್ಯದರ್ಶಿ ಹೆಚ್.ಎಸ್. ವಸಂತ್, ವಲಯ ಸೇನಾನಿ ಟಿ.ಆರ್. ಪುರುಷೋತ್ತಮ್ ಮಾತನಾಡಿದರು. ವೇದಿಕೆಯಲ್ಲಿ ಮಲ್ಲೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಎಂ.ಇ. ವೆಂಕಟೇಶ್, ಕಾರ್ಯದರ್ಶಿ ಲೋಕೇಶ್ ಹಾಜರಿದ್ದ ಕಾರ್ಯಕ್ರಮದಲ್ಲಿ ರೋಟರಿ ಪ್ರಮುಖರಾದ ರಂಗಸ್ವಾಮಿ, ಪಿ.ಕೆ. ರವಿ, ಸತೀಶ್, ನವೀನ್, ಪ್ರಕಾಶ್ ವಿವಿಧ ಕಡೆಯ ರೋಟರಿ ಕ್ಲಬ್ ಪ್ರಮುಖರು, ಆಲೂರು-ಸಿದ್ದಾಪುರ ರೋಟರಿ ಕ್ಲಬ್ ಸದಸ್ಯರು ಮತ್ತು ಸದಸ್ಯರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭ ಪತ್ರಿಕೋದ್ಯಮ ಕ್ಷೇತ್ರದ ಸಾಧಕ ಚೆರಿಯಮನೆ ಸುರೇಶ್ ಸೇರಿದಂತೆ ಹತ್ತನೆ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ೪ ಮಂದಿ ವಿದ್ಯಾರ್ಥಿಗಳನ್ನು ರೋಟರಿ ಕ್ಲಬ್ ಪ್ರಮುಖರು ಸನ್ಮಾನಿಸಿದರು.