ಗೋಣಿಕೊಪ್ಪಲು, ಜೂ. ೨೧: ಹುದಿಕೇರಿ ಪಟ್ಟಣದಲ್ಲಿರುವ ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕರು ಈ ಭಾಗದ ರೈತರಿಗೆ ಬ್ಯಾಂಕ್ ವ್ಯವಹಾರದಲ್ಲಿ ಅನಾವಶ್ಯಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪೊನ್ನಂಪೇಟೆ ಹೋಬಳಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಕಳೆದ ಹಲವಾರು ತಿಂಗಳ ಹಿಂದೆ ಆಗಮಿಸಿದ ಇಲ್ಲಿನ ವ್ಯವಸ್ಥಾಪಕ ಕೇವಲ ಕಾನೂನು ಕಟ್ಟುಪಾಡುಗಳನ್ನು ಬ್ಯಾಂಕಿನಲ್ಲಿ ಅಳವಡಿಸಿರುವ ನಾಮಫಲಕವನ್ನು ತೋರಿಸಿ ವಿವರಿಸುತ್ತಾರೆ. ಅಲ್ಲದೆ ಈ ಭಾಗದ ಬಡರೈತರಿಗೆ ಸರ್ಕಾರದ ವತಿಯಿಂದ ಸಿಗಬೇಕಾದ ಸಾಲ ಮನ್ನಾ ಯೋಜನೆಯಲ್ಲಿ ಸರ್ಕಾರಕ್ಕೆ ಸರಿಯಾದ ರೀತಿಯ ಮಾಹಿತಿ ನೀಡದೆ ಯೋಜನೆಯ ಪ್ರಯೋಜನ ಈ ಭಾಗದ ರೈತರಿಗೆ ಸಿಗುವಲ್ಲಿ ತಾರತಮ್ಯ ಎಸಗಿದ್ದಾರೆಂದು ರೈತ ಸಂಘದ ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್ ಆರೋಪಿಸಿದರು. ಕಳೆದ ಆರು ತಿಂಗಳಿನಿAದ ಈ ಭಾಗದ ರೈತರು ಬ್ಯಾಂಕಿಗೆ ತೆರಳಿ ತಮ್ಮ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದ್ದರೂ ಇಲ್ಲಿಯ ವ್ಯವಸ್ಥಾಪಕರು ಗ್ರಾಹಕ, ರೈತರಿಗೆ ಗೌರವ ನೀಡದೆ ಉಡಾಫೆಯ ಉತ್ತರ ನೀಡಿ ಬ್ಯಾಂಕಿನಿAದ ಕಳುಹಿಸುತ್ತಿದ್ದರು. ಇದರಿಂದಾಗಿ ಈ ಭಾಗದ ನೂರಾರು ರೈತರು ಬ್ಯಾಂಕಿನ ವ್ಯವಸ್ಥಾಪಕರ ಮೇಲೆ ತೀವ್ರ ಅಸಮಾಧಾನ ಗೊಂಡಿದ್ದರು. ಸಾಲವನ್ನು ಮರು ಪಾವತಿಸಿದ್ದರೂ, ಇದಕ್ಕೆ ಸ್ವೀಕೃತಿ ಪತ್ರ ನೀಡದೆ ಸತಾಯಿಸುತ್ತಿದ್ದರು. ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಯಿತು ಎಂದು ಸೂರಜ್ ತಿಳಿಸಿದರು. ಹೀಗಾಗಿ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ವ್ಯವಸ್ಥಾಪಕರನ್ನು ಇಲ್ಲಿಂದ ವರ್ಗಾವಣೆಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ರೈತ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಗೆ ಬ್ಯಾಂಕ್‌ನ ಹಿರಿಯ ಅಧಿಕಾರಿ ಶಿವುಕುಮಾರ್ ಆಗಮಿಸಿ ಬ್ಯಾಂಕಿನಲ್ಲಿ ಶಾಖಾ ವ್ಯವಸ್ಥಾಪಕರು ಸ್ಥಳೀಯ ರೈತರೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಪ್ರತಿಭಟನಾಕಾರರಲ್ಲಿ ಕ್ಷಮೆಯಾಚಿಸಿದರು. ಕನ್ನಡ ಭಾಷೆಯ ಸಮಸ್ಯೆಯಿಂದಾಗಿ ಗ್ರಾಹಕರೊಂದಿಗೆ ನಡೆದು ಕೊಂಡ ರೀತಿಯಲ್ಲಿ ಸಮಸ್ಯೆ ಎದುರಾಗಿದೆ. ಇದನ್ನು ಸರಿಪಡಿಸು ವುದಾಗಿ ಹಾಗೂ ಮುಂದಿನ ದಿನದಲ್ಲಿ ಅದಾಲತ್ ನಡೆಸಿ ರೈತರ ಸಮಸ್ಯೆ ಗಳಿಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು. ಬ್ಯಾಂಕಿನ ವ್ಯವಸ್ಥಾಪಕರು ರೈತರೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಕಾನೂನು ಸಲಹೆಗಾರರಾದ ಹೇಮಚಂದ್ರ, ಆಲೆಮಾಡ ಮಂಜುನಾಥ್, ಚಟ್ಟಂಗಡ ಕಂಬ ಕಾರ್ಯಪ್ಪ, ಅಪ್ಪಚಂಗಡ ಮೋಟಯ್ಯ, ಮೀದೇರಿರ ಕವಿತ ರಾಮು ಸೇರಿದಂತೆ ಇನ್ನಿತರರು ತಮ್ಮ ಆಕ್ರೋಶ ಹೊರ ಹಾಕಿದರು. ಈ ವೇಳೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಗೊಂದಲ ನಿವಾರಿಸುವಲ್ಲಿ ಯಶಸ್ವಿಯಾದರು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಬಾಚಮಾಡ ಭವಿಕುಮಾರ್, ತೀತರಮಾಡ ರಾಜ, ಚೊಟ್ಟೆಕಾಳಪಂಡ ಮನು, ಮೀದೇರಿರ ಕವಿತಾರಾಮು, ಮಂಡAಗಡ ಯೋಗೇಶ್, ಇಟ್ಟಿರ ವಿಷ್ಣು, ಕಿಸ ಮಾಚಯ್ಯ, ಕರ್ತಮಾಡ ಸುಜ, ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶಿವುಕುಮಾರ್ ರೈತರಿಂದ ಮನವಿ ಪತ್ರ ಸ್ವೀಕರಿಸಿದರು. ಶ್ರೀಮಂಗಲ ಠಾಣಾಧಿಕಾರಿ ಸಿಪಿಐ ಗೋವಿಂದ ರಾಜು ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಪ್ರತಿಭಟನೆ ಹಿನೆÀ್ನಲೆಯಲ್ಲಿ ಕೆಲ ಸಮಯ ವಾಹನ ಸಂಚಾರಕ್ಕೆ ವ್ಯತೆಯ ಉಂಟಾಗಿತ್ತು.

- ಹೆಚ್.ಕೆ. ಜಗದೀಶ್