ಸೋಮವಾರಪೇಟೆ, ಜೂ. ೨೦: ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳ ಮೂಲಕ ಸೋಮವಾರಪೇಟೆ ತಾಲೂಕಿಗೆ ೧೨೦೦ ಮನೆಗಳು ಮಂಜೂರಾಗಿವೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಜೀವ್ ಗಾಂಧಿ ವಸತಿ ನಿಗಮ, ತಾಲೂಕು ಪಂಚಾಯಿತಿ, ಬಸವ ವಸತಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಇಲ್ಲಿನ ಅಟಲ್‌ಜೀ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯಾದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ವಸತಿ ರಹಿತರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಸೋಮವಾರಪೇಟೆ ತಾಲೂಕಿಗೆ ೧೨೦೦ ಮನೆಗಳನ್ನು ಮಂಜೂರು ಮಾಡುವಂತೆ ಸಂಬAಧಿಸಿದ ಇಲಾಖಾ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ೧೨೦೦ ಮನೆಗಳನ್ನು ಮಂಜೂರು ಮಾಡಿದ್ದಾರೆ. ಪ್ರಥಮ ಹಂತದಲ್ಲಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ೧೮ ಗ್ರಾಮ ಪಂಚಾಯಿತಿಗಳಿಗೆ ಸಂಬAಧಿಸಿದAತೆ ೫೦೦ ಮಂದಿಗೆ ಮನೆಗಳನ್ನು ಮಂಜೂರು ಮಾಡಿ ಕಾರ್ಯಾದೇಶ ಪತ್ರ ವಿತರಿಸಲಾಗುತ್ತಿದೆ ಎಂದರು.
ರಾಜಕೀಯ ರಹಿತವಾಗಿ ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ. ಫಲಾನುಭವಿಗಳು ಕಾಲಮಿತಿಯೊಳಗೆ ಮನೆ ಕಟ್ಟಿಕೊಳ್ಳಬೇಕು. ೯೪ ಸಿ ಮತ್ತು ೫೭ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಲಾಗುವುದು. ಪಿಡಿಓಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರನ್ನು ಗುರುತು ಮಾಡಿಕೊಂಡು ಪ್ರಥಮ ಹಂತದಲ್ಲಿಯೇ ಅವರುಗಳಿಗೆ ಮನೆಗಳನ್ನು ಒದಗಿಸಿಕೊಡಬೇಕು ಎಂದು ರಂಜನ್ ಸೂಚಿಸಿದರು.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗೆ ಮನೆಗಳನ್ನು ಹಂಚಲಾಗಿದೆ. ಒಂದು ಪಂಚಾಯಿತಿಗೆ ಕನಿಷ್ಟ ೩೦ ರಿಂದ ಗರಿಷ್ಠ ೫೦ ಮನೆಗಳವರೆಗೂ ವಿತರಣೆ ಮಾಡಲಾಗಿದೆ. ಅನರ್ಹರು ಯೋಜನೆಯ ಫಲಾನುಭವಿಗಳಾಗಿದ್ದರೆ ತಮ್ಮ ಗಮನಕ್ಕೆ ತರಬೇಕೆಂದು ರಂಜನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ನೋಡಲ್ ಅಧಿಕಾರಿ ಪ್ರದೀಪ್ ಕೆ.ವಿ., ಜಿ.ಪಂ. ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು, ಸದಸ್ಯರುಗಳು ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.