ಶ್ರೀಮಂಗಲ, ಜೂ. ೨೦: ಕೊಡವ ಸಮಾಜಗಳು ಕಲ್ಯಾಣ ಮಂಟಪಕ್ಕೆ ಸೀಮಿತವಾಗಿ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂಬ ಅಪವಾದಕ್ಕೆ ವಿರುದ್ಧವಾಗಿ ಕೊಡವ ಜನಾಂಗದ ಸಮಗ್ರ ಏಳಿಗೆ ಹಾಗೂ ಹಿತಾಸಕ್ತಿಗೆ ಪೂರಕವಾಗಿ ಕ್ರಿಯಾಯೋಜನೆ ಹಮ್ಮಿಕೊಂಡು ಕಾರ್ಯ ನಿರ್ವಹಿಸುವುದಾಗಿ ಪೊನ್ನಂಪೇಟೆ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಹೇಳಿದರು.
ಈ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ೨೦೨೨-೨೫ ರ ೩ ವರ್ಷಗಳ ಅವಧಿಗೆ ೧೨ ಸದಸ್ಯರ ಆಡಳಿತ ಮಂಡಳಿಯ ಅಭಿಪ್ರಾಯದಂತೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಮೋಟಯ್ಯ ಮಾಹಿತಿ ನೀಡಿದರು.
ಕೊಡವ ಜನಾಂಗದ ಸರ್ವತೋಮುಖ ಏಳಿಗೆಗೆ ಪ್ರಯತ್ನಿಸುವುದು, ಕೊಡವಾಮೆ ಯನ್ನು ಬೆಳೆಸಿ ಪೋಷಿಸುವುದು, ಕೊಡವ ಸಂಸ್ಕೃತಿ, ಪದ್ದತಿ-ಪರಂಪರೆ, ಹಬ್ಬಗಳ ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡಲು ಕಾರ್ಯಯೋಜನೆ ರೂಪಿಸಲಾಗಿದೆ. ಕೊಡವ ಭಾಷೆಯ ಬೆಳವಣಿಗೆಗೆ ಪೂರಕವಾಗಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೊಡವ ಭಾಷೆಯ ಸಮಗ್ರ ಪುಸ್ತಕ ಸಂಗ್ರಹಿಸಿ ‘ಕೊಡವ ಪುಸ್ತಕ ಲೋಕ’ ಗ್ರಂಥಾಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೊಡವ ಭಾಷೆಯಲ್ಲಿ ಪ್ರಕಟವಾಗಿರುವ ಮೊದಲ ಪುಸ್ತಕದಿಂದ ಇಂದಿನವರೆಗೆ ಪ್ರಕಟವಾದ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸಲು ಸಿದ್ಧತೆ ನಡೆದಿದೆ. ಈ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುತ್ತದೆ.
ಕೊಡವ ಜನಾಂಗದಲ್ಲಿ ವಧು-ವರ ಅನ್ವೇಷಣೆಗೆ ತಂದ್-ಬೆAದ್ ವೇದಿಕೆ ಕಲ್ಪಿಸಲು ಕೆಲವು ವರ್ಷ ಸ್ಥಗಿತವಾಗಿದ್ದ ಯೋಜನೆಯನ್ನು ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದೊಂದಿಗೆ ಮತ್ತೆ ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ. ಕೊಡವ ಸಮಾಜದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತದೆ.
ಪೊನ್ನಂಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾದ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯ ಏಳಿಗೆಗೆ ಹೆಚ್ಚಿನ ಒತ್ತು ನೀಡಲಾಗುವುದು. ೧೦ನೇ ತರಗತಿಯಲ್ಲಿ ಸತತವಾಗಿ ಶೇ.೧೦೦ ಫಲಿತಾಂಶ ನೀಡುತ್ತಿರುವ ವಿದ್ಯಾಲಯದಲ್ಲಿ ಇನ್ನಷ್ಟು ಗುಣಮಟ್ಟದ ಮತ್ತು ಸ್ಪರ್ಧಾತ್ಮಕ ಶಿಕ್ಷಣವನ್ನು ನೀಡಲು ಕಾರ್ಯಯೋಜನೆ ಕೈಗೆತ್ತಿಕೊಳ್ಳಲಾಗು ವುದು. ಚಿಕ್ಕಮುಂಡೂರು ಗ್ರಾಮದಲ್ಲಿರುವ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಜಾಗದಲ್ಲಿ ಶಿಕ್ಷಣ ಸಂಸ್ಥೆಗೆ ಅಥವಾ ಕೊಡವ ಜನಾಂಗದ ಹಿತದೃಷ್ಟಿಗೆ ಪೂರಕವಾದ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಲು ಚಿಂತನೆಯಿದೆ ಎಂದು ಮೋಟಯ್ಯ ವಿವರಿಸಿದರು.
ಇದಲ್ಲದೆ ತಾ.೨೧ ರಂದು ಅಂರ್ರಾಷ್ಟಿçÃಯ ಯೋಗ ದಿನವನ್ನು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಚರಿಸಲಾಗುತ್ತಿದೆ. ಇದರಲ್ಲಿ ಕಾನೂರು-ಕೋತೂರು ಮಹಿಳಾ ಸಮಾಜ, ಭಾರತ ಸ್ಕೌಟ್ ಗೈಡ್ ಮತ್ತು ಸ್ಥಳೀಯ ಸಂಸ್ಥೆ ಕೈಜೋಡಿಸಿವೆ. ಅಂರ್ರಾಷ್ಟಿçÃಯ ಯೋಗಪಟು ಚೊಟ್ಟೋಳಿಯಮ್ಮಂಡ ಅಮೃತ್ ರಾಕೇಶ್ ಕಾರ್ಯಕ್ರಮ ನಡೆಸಿಕೊಡ ಲಿದ್ದು, ಈಗಾಗಲೇ ೮೦ ಯೋಗ ಪಟುಗಳು ನೋಂದಾಯಿಸಿ ಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌ. ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಸಹಕಾರ್ಯದರ್ಶಿ ಆಲೇಮಾಡ ಸುಧೀರ್, ಖಾಯಂ ಆಹ್ವಾನಿತರಾದ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಆಡಳಿತ ಮಂಡಳಿಯ ನಿರ್ದೇಶಕರಾದ ಮೂಕಳೇರ ಕಾವ್ಯ ಕಾವೇರಮ್ಮ, ಕೊಣಿಯಂಡ ಸಂಜು ಸೋಮಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಮೂಕಳಮಾಡ ಅರಸು ನಂಜಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಚೆಪ್ಪುಡೀರ ರಾಕೇಶ್ ದೇವಯ್ಯ, ಚೀರಂಡ ಕಂದಾ ಸುಬ್ಬಯ್ಯ ಹಾಜರಿದ್ದರು.