ಮಡಿಕೇರಿ, ಜೂ. ೨೧: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗ ಹಾಗೂ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಬಾಹ್ಯ ಸೇವಾ ಕೇಂದ್ರ ಇವರ ವತಿಯಿಂದ ಎರಡು ದಿನಗಳ ಶ್ರವಣ ಸಾಧನ ವಿತರಣಾ ಶಿಬಿರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರವಣ ಸಾಧನ ಉಪಕರಣ ಎಲ್ಲಾ ಕಡೆಯಲ್ಲೂ ಸಿಗುತ್ತವೆ. ಸಿಗುವ ಕಡೆ ಅದರ ಉಪಯೋಗವನ್ನು ಬಳಸಿ ಕೊಳ್ಳಬೇಕು. ಈ ದಿನ ಉಚಿತವಾಗಿ ಫಲಾನುಭವಿಗಳನ್ನು ಗುರುತಿಸಿ ಶ್ರವಣ ಉಪಕರಣ ನೀಡಲಾಗಿದೆ. ಮಾನವನ ದೇಹದಲ್ಲಿ ಕಿವಿ, ಮೂಗು, ಗಂಟಲು ಅದರದೇ ಆದ ಪ್ರಾಮುಖ್ಯತೆ ಹೊಂದಿದೆ. ಇದರಲ್ಲಿ ಕಿವಿಯು ಅತ್ಯಂತ ಪ್ರಾಮುಖ್ಯವಾದ ಅಂಶ. ಕಿವಿ, ಮೂಗು, ಗಂಟಲು ಅಂಗ ಗಳನ್ನು ಜೋಪಾನವಾಗಿ ರಕ್ಷಣೆ ಮಾಡಿಕೊಳ್ಳಬೇಕಾದರೆ ಮುನ್ನೆಚ್ಚರ ವಹಿಸಬೇಕು. ಎಷ್ಟು ಶಬ್ದವನ್ನು ಆಲಿಸ ಬೇಕು ಎಂಬುದನ್ನು ತಿಳಿದಿರಬೇಕು.

ಸರ್ಕಾರವು ಇತ್ತೀಚೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಯಾವ ಸ್ಥಳದಲ್ಲಿ ಯಾವ ರೀತಿಯಾದ ಶಬ್ದವನ್ನು ಯಾವ ಪ್ರಮಾಣದಲ್ಲಿ ಶಬ್ದ ಇರಬೇಕು ಮತ್ತು ಹೇಗೆ ಬಳಸಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿದೆ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಕೆ.ಬಿ.ಕಾರ್ಯಪ್ಪ ಮಾತನಾಡಿ, ಶ್ರವಣ ಉಪಕರಣವು ಒಂದು ಪ್ರಯೋಜನ ವಾದ ಸಾಧನ. ಅದರ ಬಗ್ಗೆ ಅರಿತು ಅದರ ಉಪಯೋಗ ಪಡೆಯಬೇಕು. ಫಲಾನುಭವಿಗಳು ಎಲ್ಲರೂ ಉಪಕರಣ ಬಳಸುವಂತಾಗಬೇಕು. ಪ್ರಸ್ತುತ ನೂರು ಉಪಕರಣ ಇಎನ್‌ಟಿ ವಿಭಾಗದಿಂದ ನೀಡಲಾಗಿದೆ. ಸುಮಾರು ೧೫ ರಿಂದ ೨೦ ಸಾವಿರ ಬೆಲೆಬಾಳುವ ಉಪಕರಣವನ್ನು ಫಲಾನುಭವಿಗಳಿಗೆ ನೀಡಿದ್ದಾರೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ಈವರೆಗೆ ಸುಮಾರು ೩೦೦ ಸರ್ಜರಿಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು. ಇಎನ್‌ಟಿ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ ಶ್ರವಣ ದೋಷದ ಬಗ್ಗೆ ಯಾವ ರೀತಿಯಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಮತ್ತು ಯಾವ ಪ್ರಮಾಣದಲ್ಲಿ ಶಬ್ದವನ್ನು ಆಲಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಅಧೀಕ್ಷಕ ಡಾ. ರೂಪೇಶ್ ಗೋಪಾಲ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಜಿತ್ ಪ್ರಾರ್ಥಿಸಿದರು, ಪಂಚಮ್ ಪೊನ್ನಪ್ಪ ನಿರೂಪಿಸಿದರು.