ವೀರಾಜಪೇಟೆ, ಜೂ. ೧೯: ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಗಣಪತಿ ಆರ್ಕೇಡ್ ಸಭಾಂಗಣದಲ್ಲಿ ಆದೇಶ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಸಭೆಯನ್ನು ಉದ್ದೇಶಿಸಿ ಪ್ರ‍್ರಾಸ್ತಾವಿಕ ಭಾಷಣ ಮಾಡಿದ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪಿ.ಎ. ಜಾನ್ಸನ್ ಅವರು ಮುಂದಿನ ಚುನಾವಣೆಯನ್ನು ಶಕ್ತವಾಗಿ ಎದುರಿಸಲು ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಸಮಿತಿ ರಚನೆ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಆದೇಶದ ಮೇರೆಗೆ ಸಮಿತಿಯನ್ನು ಪುನರ್ ರಚನೆ ಮಾಡಲಾಗಿದೆ. ಮಡಿಕೇರಿಯಲ್ಲಿ ಒಂದು ದಿನದ ನವ ಸಂಕಲ್ಪ ಕಾರ್ಯಗಾರವನ್ನು ಆಯೋಜಿಸಲಾಗುತ್ತಿದ್ದು ಹೊಸ ಸಮಿತಿಯ ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಇರುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅವರು ಸಮಿತಿಯ ಪುನರ್ ರಚನೆಯಾಗಿದ್ದು, ಚುನಾವಣೆಯ ಹಿತದೃಷ್ಟಿಯಿಂದಾಗಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸಮಿತಿಯಲ್ಲಿ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗದೆ. ಎಲ್ಲಾ ಧರ್ಮ ಜಾತಿಗಳಿಗೆ ಸಮಾನ ಗೌರವ ನೀಡಿ ವ್ಯಕ್ತಿಗಳನ್ನು ಆಯ್ಕೆಗೊಳಿಸಿ ಸಮಿತಿ ರಚನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಾಸಿಕ ಸಭೆಗೆ ಸತತವಾಗಿ ಮೂರು ಬಾರಿ ಗೈರು ಹಾಜರಾದಲ್ಲಿ ಸಮಿತಿಯಿಂದ ಕೈಬಿಡಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಸಮಿತಿಗೆ ನಾಲ್ಕು ಮಂದಿ ಉಪಾಧ್ಯಕ್ಷರುಗಳು, ನಾಲ್ಕು ಮಂದಿ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು ೨೫ ಮಂದಿ ಆಯ್ಕೆಗೊಂಡು ಸಭಾಧ್ಯಕ್ಷರಿಂದ ಆದೇಶ ಪತ್ರ ಸ್ವೀಕರಿಸಿದರು.

ಸಭೆಯನ್ನು ಉದ್ದೇಶಿಸಿ ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ವಿ.ಕೆ. ಸತೀಶ್ ಮಾತನಾಡಿದರು, ವೇದಿಕೆಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್, ಮಹಿಳಾ ಘಟಕದ ಅಧ್ಯಕ್ಷೆ ತೋರೇರ ಪೊನ್ನಕ್ಕಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದಿವ್ಯ ಉಪಸ್ಥಿತರಿದ್ದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ರಾಜೇಶ್ ಪದ್ಮನಾಭ, ಫಾಸೀಯ ತಬ್ಸುಂ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು, ವಲಯ ಅಧ್ಯಕ್ಷರುಗಳು, ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರು ಹಾಜರಿದ್ದರು.