ಮಡಿಕೇರಿ, ಜೂ. ೧೮: ಹುಬ್ಬಳ್ಳಿಯ ಸಾಹಿತಿ ಗೊಗೇರಿ ಅವರಿಗೆ ದೊರೆತಿದ್ದ ೨೦೧೩ನೇ ಸಾಲಿನ ಕನ್ನಡ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ದು ಪಡಿಸುವಂತೆ ಆದೇಶಿಸಿದೆ. ಕೊಡಗು ಜಿಲ್ಲೆಯ ಕಣಿವೆಯ ಭಾರದ್ವಾಜ ಆನಂದತೀರ್ಥ ಅವರು ಬರೆದ ಪುಸ್ತಕ ಹಾಗೂ ಪ್ರಶಸ್ತಿ ದೊರೆತಿದ್ದ ಗೊಗೇರಿ ಅವರು ಬರೆದ ಪುಸ್ತಕಗಳನ್ನು ಮರು ಪರಿಶೀಲಿಸಿ ಇಬ್ಬರಲ್ಲಿ ಅರ್ಹರಿಗೆ ಪ್ರಶಸ್ತಿ ನೀಡುವಂತೆ ಕನ್ನಡ ಸಾಹಿತ್ಯ ಅಕಾಡೆಮಿಗೆ ಸೂಚಿಸಿದೆ.
೨೦೧೩ನೇ ಇಸವಿಯ ಪುಸ್ತಕ ಪ್ರಶಸ್ತಿಗೆ ಸಾಹಿತ್ಯ ಅಕಾಡೆಮಿಯಿಂದ ‘ಲಲಿತಪ್ರಬಂಧ ಹಾಗೂ ಜೀವನಚರಿತ್ರೆ’ ಸಾಹಿತ್ಯ ಪ್ರಕಾರಗಳಲ್ಲಿ ಪುಸ್ತಕಗಳನ್ನು ಆಹ್ವಾನಿಸಿದ್ದು, ಗೊಗೇರಿ, ಭಾರದ್ವಾಜ ಸೇರಿದಂತೆ ಹಲವಾರು ಮಂದಿ ಪುಸ್ತಕಗಳನ್ನು ಸಲ್ಲಿಸಿದ್ದರು. ಇದರಲ್ಲಿ ಗೊಗೇರಿ ಹಾಗೂ ಭಾರದ್ವಾಜ ಅವರುಗಳು ಬರೆದ ಪುಸ್ತಕಗಳಿಗೆ ಒಂದೇ ಅಂಕ (೫೬) ದೊರಕಿತ್ತು. ಇಂತಹ ಸಂದರ್ಭಗಳಲ್ಲಿ ನಿಯಮದ ಪ್ರಕಾರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರನ್ನು ಒಳಗೊಂಡ ಉಪಸಮಿತಿಯು ಚರ್ಚಿಸಿ ಒಂದು ಕೃತಿಗೆ ಬಹುಮಾನ ನೀಡಬೇಕೆಂಬುದಾಗಿದೆ.
ಕೆ.ಭಾರದ್ವಾಜ ಅವರ ಪರ ವಾದ ಮಂಡಿಸಿದ ವಕೀಲ ಮುರಳೀಧರ್ ಅವರು, ಈ ನಿಯಮ ಪಾಲಿಸದೆ ವಿಜೇತರನ್ನು ನಿಶ್ಚಯಿಸಲಾಗಿದೆ ಎಂಬುದಾಗಿ ವಾದಿಸಿದ್ದರು. ಸರಕಾರ ಹಾಗೂ ಸಾಹಿತ್ಯ ಅಕಾಡೆಮಿ ಪರ ವಾದ ಮಂಡಿಸಿದ ವಕೀಲೆ ಶಾರದಾಂಬ ಎರಡೂ ಕೃತಿಗಳನ್ನು ಪರಿಗಣಿಸಿ ಅಧ್ಯಕ್ಷರ ಹಾಗೂ ಇಬ್ಬರು ಸದಸ್ಯರನ್ನೊಳಗೊಂಡ ಉಪ ಸಮಿತಿಯ ಸಭೆಯಲ್ಲಿ ಚರ್ಚಿಸಿ ಪ್ರಶಸ್ತಿ ನೀಡಲಾಯಿತೆಂದು ಸಮರ್ಥಿಸಿದ್ದರು.
ಆದರೆ ಈ ಉಪಸಮಿತಿಯು ಈ ಸಭೆಯ ಯಾವುದೇ ವಿಚಾರವನ್ನು ದಾಖಲೆ ಮಾಡಿರುವುದಿಲ್ಲ, ಪ್ರಶಸ್ತಿ ನೀಡುವ ಮುನ್ನ ಸಭೆ ಸೇರಿಲ್ಲ ಎಂದು ತೀರ್ಮಾನಿಸಿ ನ್ಯಾಯಾಲಯ ಗೊಗೇರಿ ಅವರಿಗೆ ಲಭಿಸಿರುವ ಪ್ರಶಸ್ತಿಯನ್ನು ರದ್ದು ಪಡಿಸಿ ಆದೇಶಿಸಿದೆ ಹಾಗೂ ಭಾರದ್ವಾಜ ಮತ್ತು ಗೊಗೇರಿ ಅವರ ಪುಸ್ತಕಗಳನ್ನು ಮತ್ತೆ ಪರಿಗಣಿಸಿ ರದ್ದು ಆದೇಶ ಹೊರಡಿಸಿದ ದಿನದಿಂದ (ಜೂನ್ ೨-೨೦೨೨) ೨ ತಿಂಗಳೊಳಗೆ ಪ್ರಶಸ್ತಿ ಘೋಷಣೆ ಮಾಡುವಂತೆ ಸೂಚಿಸಿದೆ. ಪ್ರಶಸ್ತಿಯು ರೂ.೫,೦೦೦ ನಗದು ಸೇರಿದಂತೆ ಕಾಣಿಕೆ ಹಾಗೂ ಪ್ರಮಾಣ ಪತ್ರವನ್ನು ಹೊಂದಿದೆ.