ಕೆ.ಎA. ಇಸ್ಮಾಯಿಲ್ ಚೆಟ್ಟಳ್ಳಿ, ಜೂ. ೧೭: ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಸ ವಿಲೇವಾರಿ ಸಮಸ್ಯೆ ಹೆಚ್ಚಾಗುತ್ತಿದೆ. ಆದರೆ ಸಮಸ್ಯೆ ಪರಿಹರಿಸುವಲ್ಲಿ ಗ್ರಾಮ ಪಂಚಾಯ್ತಿ ವೈಫಲ್ಯ ಸಾಧಿಸಿರುವುದು ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಗಿದೆ.ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಇಚ್ಛಾಶಕ್ತಿಯ ಕೊರತೆಯಿಂದ, ದಶಕಗಳಿಂದ ಚೆಟ್ಟಳ್ಳಿಯ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ. ರಾಜಕೀಯ, ವೈಯಕ್ತಿಕ ಟೀಕೆಗಳ ನಡುವೆ ಅಭಿವೃದ್ಧಿ ಮರಿಚೀಕೆಯಾಗಿದೆ. ತಾ. ೧೮ರ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರ ಭೇಟಿ ಜನರಲ್ಲಿ ಭರವಸೆ ಹುಟ್ಟಿಸಿದೆ.
ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಮಾರುಕಟ್ಟೆಯ ಹಿಂಭಾಗದಲ್ಲಿ ಕಸ ತುಂಬಿ ದುರ್ನಾಥ ಬೀರುತ್ತಿರುವುದರಿಂದ ಅಲ್ಲಿಗೆ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ. ಹಸಿ ಕಸ, ಒಣ ಕಸ ಎಲ್ಲವೂ ಮಿಶ್ರಿತವಾಗಿ ದುರ್ವಾಸನೆಯಿಂದ ಚೆಟ್ಟಳ್ಳಿ ಮಾರುಕಟ್ಟೆಯಲ್ಲಿ ನಿಲ್ಲಲಾಗದಂತಹ ಪರಿಸ್ಥಿತಿ ಎದುರಾಗಿದೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ, ಹಲವು ವರ್ಷಗಳಿಂದ ಇದೇ ತೊಂದರೆಯಲ್ಲಿ ಜನ ಜೀವನ ನಡೆಸಬೇಕಾಗಿದೆ. ಆದರೂ ಕೂಡ ಇದುವರೆಗೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಶಾಶ್ವತವಾದ ಪರಿಹಾರ ಕಾಣಿಸಲು ಸಾಧ್ಯವಾಗಲಿಲ್ಲ.
ನಿಷ್ಪçಯೋಜಕ ವಾಹನ
ಎರಡು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹಸಿ ಹಾಗೂ ಒಣ ಕಸವನ್ನು ಸಂಗ್ರಹಿಸಿಡಲು ಕಸದ ಬುಟ್ಟಿಯನ್ನು ಹಾಗೂ ವಿಲೇವಾರಿ ವಾಹನವನ್ನು ನೀಡಲಾಗಿತ್ತು.
ಬಹುತೇಕ ಗ್ರಾಮ ಪಂಚಾಯಿತಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಕಸದ ಸಮಸ್ಯೆಗೆ ಪರಿಹಾರ ಕಂಡುಕೊAಡಿದೆ. ಆದರೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ವಿತರಿಸಿರುವ ಕಸದ ಬುಟ್ಟಿಗಳು ಮೂಲೆ ಸೇರಿ ಎರಡು ವರ್ಷಗಳೇ ಕಳೆದಿವೆ ಹಾಗೂ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಇದರಿಂದ ವಾಹನ ನಿಷ್ಪçಯೋಜಕವಾಗಿದ್ದು, ಸದ್ಯದಲ್ಲೇ ವಾಹನವು ಗುಜರಿಗೆ ಸೇರಲಿದೆ.
ಕಸ ವಿಲೇವಾರಿಗೆ ಜಾಗವಿಲ್ಲ!
ಕಳೆದ ಗ್ರಾಮ ಸಭೆಯಲ್ಲಿ ಕಸದ ಸಮಸ್ಯೆಗೆ ಹಾಗೂ ಚೆಟ್ಟಳ್ಳಿ ಪಟ್ಟಣ ಅಶುಚಿತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ, ಆರು ತಿಂಗಳುಗಳೊಳಗೆ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ಕಸ ವಿಲೇವಾರಿ ಮಾಡಲು ಸೂಕ್ತ ಜಾಗವನ್ನು ಗುರುತಿಸಲಾಗುವುದೆಂದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಉತ್ತರ ನೀಡಿದ್ದರು. ಆದರೆ ಇದುವರೆಗೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಚೆಟ್ಟಳ್ಳಿಯಲ್ಲಿ ಶನಿವಾರ ಹಾಗೂ ಭಾನುವಾರ ವಾರದ ಸಂತೆ ನಡೆಯುತ್ತೆ. ಆದರೆ ಕಸದಿಂದ ಬರುವ ದುರ್ವಾಸನೆಯಿಂದ ಮಾರುಕಟ್ಟೆಗೆ ಗ್ರಾಹಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಇದೀಗ ಮಳೆಗಾಲ ಆರಂಭಗೊAಡಿದ್ದು ಸಾಂಕ್ರಾಮಿಕ ರೋಗದ ಭಯದಲ್ಲೇ ಜೀವನ ನಡೆಸುವ ಪರಿಸ್ಥಿತಿ ಚೆಟ್ಟಳ್ಳಿ ಗ್ರಾಮಸ್ಥರಿಗೆ ಎದುರಾಗಿದೆ.
ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಹಳೆಯ ಹಂದಿ ಮಾಂಸದ ಮಳಿಗೆ ಈಗ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿಡುವ ಕಟ್ಟಡವಾಗಿ ಮಾರ್ಪಟ್ಟಿದೆ. ಕಟ್ಟಡವು ಇಂದೋ, ನಾಳೆ ಬೀಳುವ ಹಂತ ತಲುಪಿದೆ.
ಡಿಸಿ ಭೇಟಿ ಹಿನ್ನೆಲೆ ಕಸ ತೆರವು
ತಾ. ೧೮ ರಂದು (ಇಂದು) ಚೆಟ್ಟಳ್ಳಿಯಲ್ಲಿ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಹಿನ್ನೆಲೆ, ಇದೀಗ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಹಿಂಬದಿಯಲ್ಲಿ ಕಸವನ್ನು ತೆರವುಗೊಳಿಸಿ ಕಸ ಕಾಣದಂತೆ ಮಣ್ಣು ಮುಚ್ಚಲಾಗಿದೆ.
ಇದರ ಬಗ್ಗೆ ಗ್ರಾಮಸ್ಥರು, ಗ್ರಾ.ಪಂ. ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ಹೇಳಿ, ಕಸವನ್ನು ಎರಡು ದಿನಕ್ಕೆ ಸೀಮಿತವಾಗಿ ತೆರವುಗೊಳಿಸದೆ, ಶಾಶ್ವತವಾಗಿ ಕಸದ ಸಮಸ್ಯೆಗೆ ಪರಿಹಾರ ಕೊಡಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇನ್ನೂ ನಾವು ಎಲ್ಲಿ ಕಸ ಹಾಕುವುದು, ಮನೆಯ ಹಿಂದೆ ಕಸವನ್ನು ಶೇಖರಿಸಿಡಲು ಸಾಧ್ಯವೇ ಎಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯನ್ನು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ನಮಗೆ ಕಸವನ್ನು ರಸ್ತೆಯ ಬದಿಯಲ್ಲಿಯೇ ಹಾಕುವ ಪರಿಸ್ಥಿತಿ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರಾಮ ಪಂಚಾಯಿತಿಗೆ ಸಾಧ್ಯವಾಗಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇಡೀ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಮೇಲೆ ನಿರೀಕ್ಷೆಯಿಟ್ಟಿದ್ದಾರೆ. ಚೆಟ್ಟಳ್ಳಿಯ ದಶಕಗಳ ಕಸದ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ವಿಶ್ವಾಸ ಜನರಲ್ಲಿದೆ.