ಚೆಯ್ಯಂಡಾಣೆ, ಜೂ. ೧೭: ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ ಮುಹ್ಯದ್ದೀನ್ ಜುಮ್ಮಾ ಮಸೀದಿ ಬಳಿ ನಾಪೋಕ್ಲು ವೀರಾಜಪೇಟೆ ಮುಖ್ಯರಸ್ತೆಯಲ್ಲಿ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಹಲವಾರು ವರ್ಷಗಳಿಂದ ಚರಂಡಿ ಹಾಗೂ ಮೋರಿಗಳನ್ನು ಸ್ವಚ್ಛಗೊಳಿಸದೆ ಮಣ್ಣು ತುಂಬಿ ನೀರು ಸರಾಗವಾಗಿ ಹರಿಯದೆ ರಸ್ತೆಯುದ್ದಕ್ಕೂ ನೀರು ಪ್ರವಾಹದ ರೀತಿಯಲ್ಲಿ ಹರಿಯುತ್ತಿದೆ. ಸಮೀಪದಲ್ಲೇ ಮುಹ್ಯದ್ದೀನ್ ಮಸೀದಿ, ವಿಜಯ ವಿದ್ಯಾ ಸಂಸ್ಥೆ, ಅಂಗನವಾಡಿ ಕಾರ್ಯಾಚರಿಸುತ್ತಿದೆ. ಸಾರ್ವಜನಿಕರು ಹಾಗೂ ಮಕ್ಕಳ ಓಡಾಟಕ್ಕೆ ತೊಂದರೆಯಾಗಿದೆ. ವಾಹನ ಸವಾರರಿಗೂ ತೊಂದರೆ ಎದುರಾಗಿದೆ. ಇಂದಿನ ಸಾಧಾರಣ ಮಳೆಗೆ ಈ ರೀತಿಯಾದರೆ ಮುಂದೆ ವರ್ಷಧಾರೆ ಬಿರಿಸುಪಡೆದರೆ ಮತ್ತಷ್ಟು ಸಮಸ್ಯೆ ಉಲ್ಭಣಿಸುವ ಹಿನ್ನೆಲೆ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. - ಅಶ್ರಫ್