ಗೋಣಿಕೊಪ್ಪಲು, ಜೂ. ೧೭: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ೧೦೬ ವರ್ಷ ಇತಿಹಾಸವನ್ನು ಹೊಂದಿದ್ದು, ಮುಂದಿನ ಜನವರಿಯಲ್ಲಿ ಶಾಲಾ ಶತಮಾನೋತ್ಸವವನ್ನು ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಶತಮಾನೋತ್ಸವ ಆಚರಣೆಗೆ ತಗಲುವ ಖರ್ಚು ವೆಚ್ಚಗಳ ಬಗ್ಗೆ ಚರ್ಚಿಸಲಾಯಿತಲ್ಲದೆ, ತಿಂಗಳಿಗೊಮ್ಮೆ ಸಭೆ ನಡೆಸಲು ತೀರ್ಮಾನಿಸ ಲಾಯಿತು. ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿ ಸದಸ್ಯತನ ಆಂದೋಲನ ನಡೆಸುವ ಬಗ್ಗೆ, ಸ್ಮರಣ ಸಂಚಿಕೆ ಹೊರತರುವ ಬಗ್ಗೆ ನಿರ್ಧರಿಸಲಾಯಿತು. ೧೯೧೬ ರಲ್ಲಿ ಹುಲ್ಲಿನ ಛಾವಡಿಯಲ್ಲಿ ಶಾಲೆಯು ಆರಂಭವಾಗಿದ್ದು ಶಾಲಾ ನೂತನ ಕಟ್ಟಡ ನಿರ್ಮಾಣ ಇತ್ಯಾದಿ ವಿಚಾರಗಳ ಬಗ್ಗೆಯೂ ಮಾತುಕತೆ ನಡೆಯಿತು.
ಸಭೆಯಲ್ಲಿ ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ಖಜಾಂಚಿ ಎಂ.ಪಿ. ಪ್ರಮೋದ್ ಕಾಮತ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಕೆ.ಆರ್. ಶಾಂತಿ, ಸದಸ್ಯರಾದ ಕೆ.ಬಿ. ನವೀನ್, ಎಂ.ಎಸ್. ಹಬೀಬುನ್ನೀಸಾ, ಟಿ.ಎಲ್. ಶ್ರೀನಿವಾಸ್, ಎ.ಎನ್. ದಮಯಂತಿ, ಎನ್.ಕೆ. ಜಯಶ್ರೀ, ಕಲಾ ಶಿಕ್ಷಕ ಬಿ.ಆರ್. ಸತೀಶ್, ಕೆ.ಡಿ. ದಯಾನಂದ ಉಪಸ್ಥಿತರಿದ್ದರು.