*ಗೋಣಿಕೊಪ್ಪ, ಜೂ. ೧೬ : ಅಕ್ಕಿ ರೊಟ್ಟಿ, ಮಿತ ಆಹಾರ, ನಿತ್ಯ ಚಟುವಟಿಕೆ ನನ್ನ ಆರೋಗ್ಯದ ಗುಟ್ಟು ಎಂದು ಗೋಣಿಕೊಪ್ಪದ ಶತಾಯುಷಿ ಬುಟ್ಟಿಯಂಡ ಎಂ. ಅಪ್ಪಾಜಿ ಹೇಳಿದರು.

ಮೇ ೧೫ ರಂದು ೧೦೦ ವರ್ಷ ತುಂಬಿದ ಹಿನ್ನೆಲೆ, ಪೊನ್ನಂಪೇಟೆ ಕಾರ್ಯನಿರತ ಪತ್ರಕರ್ತರ ಸಂಘದಿAದ ಅವರ ಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಜನಭೇಟಿ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಆರೋಗ್ಯ, ಆಯಸ್ಸು ವೃದ್ಧಿಗೆ ಆಹಾರ ಕ್ರಮದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

ಬದುಕಿನ ಆರಂಭದಿAದಲೇ ತಾಯಿ ಮಾಡುತ್ತಿದ್ದ ಅಕ್ಕಿರೊಟ್ಟಿ ಬೆಳಗಿನ ಉಪಹಾರದಲ್ಲಿ ಮುಖ್ಯಪಾತ್ರ ವಹಿಸಿತ್ತು. ಅಕ್ಕಿರೊಟ್ಟಿ, ಪಾಪುಟ್ಟ್, ತರಕಾರಿ, ಕಾಫಿ ಬೆಳಿಗ್ಗೆ ಸೇವಿಸುತ್ತಿದ್ದೆ. ಬೇರೆ ಹೊತ್ತಿನಲ್ಲಿ ಮಾಂಸ, ಮೀನು ಸೇವಿಸುತ್ತೇನೆ. ಎಣ್ಣೆ ಹೆಚ್ಚು ಇರುವ ಅಂಶವನ್ನು ತ್ಯಜಿಸುತ್ತಿದ್ದೆ. ಹೆತ್ತವರು ಕೂಡ ಇದನ್ನೆ ತಿಳಿಸಿದ್ದರು. ಮಿತ ಆಹಾರ ಸೇವನೆ ಮುಖ್ಯ. ಇದು ಈಗಲೂ ಕೂಡ ಆರೋಗ್ಯ ರಕ್ಷಿಸಿಕೊಳ್ಳಲು ಸಾಧ್ಯವಾಗಿದೆ ಎಂದರು. ಬೆಳಗ್ಗೆ ನಡೆಯುವ ಅಭ್ಯಾಸ ರೂಡಿಸಿಕೊಳ್ಳಬೇಕು. ಕ್ರೀಡೆ ಪರಿಣಾಮಕಾರಿಯಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುತ್ತದೆ ಎಂಬುವುದನ್ನು ನಾನು ಅರಿತುಕೊಂಡಿದ್ದೇನೆ. ಮಕ್ಕಳಿಗೆ ಮಿತ ಆಹಾರ ಸೇವಿಸಲು ಪಾಲಕರು ಪ್ರೋತ್ಸಾಹ ನೀಡಬೇಕು. ಮದ್ಯ ಸೇವಿಸದಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಇಳಿ ವಯಸ್ಸಿನಲ್ಲಿ ಯೂ ದೇಶ ಸೇವೆ, ಸಾಮಾಜಿಕ ಜವಬ್ದಾರಿ ಹೊತ್ತು ನೀಡಿದ ಸೇವೆಗಳ ಬಗ್ಗೆ ಮೆಲುಕು ಹಾಕಿದರು.

ಪತ್ರಿಕೆ ಓದಬೇಕು : ಬೆಳಗ್ಗಿನ ಚಟುವಟಿಕೆಯಲ್ಲಿ ಪತ್ರಿಕೆ ಓದುವ ಹವ್ಯಾಸ ಸಮಾಜವನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ಮಾಹಿತಿ ಅರಿತುಕೊಂಡು ಜನರಿಗೆ ಬೇಕಾದ ಸೇವೆ ನೀಡಲು ಕೂಡ ಜನರಿಗೆ ಪ್ರಯೋಜನಕ್ಕೆ ಬರುತ್ತದೆ. ಈಗಿನ ಯುವ ಪೀಳಿಗೆ ಪತ್ರಿಕೆ ಓದುವುದನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಪಾಲಕರು ಎಚ್ಚೆತ್ತುಕೊಳ್ಳಬೇಕು. ಶಿಕ್ಷಣದೊಂದಿಗೆ ಪತ್ರಿಕೆ ಓದುವುದನ್ನು ಕಲಿಸಬೇಕು ಎಂದು ಹೇಳಿದರು.

ಮಹಾತ್ಮಗಾಂಧಿ ನೆನಪು : ಸ್ವಾತಂತ್ರö್ಯ ಹೋರಾಟ ಸಂದರ್ಭ ೧೯೩೪ ರಲ್ಲಿ ಮಹಾತ್ಮಗಾಂಧಿ ಪೊನ್ನಂಪೇಟೆ ಮತ್ತು ಹುದಿಕೇರಿಗೆ ಬಂದಿದನ್ನು ನೆನೆಪಿಸಿಕೊಂಡರು. ಗಾಂಧಿ ನನ್ನ ತಲೆಗೆ ಕೈಇಟ್ಟು ಶುಭ ಕೋರಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ, ಅಂದಿನ ಹೋರಾಟಗಾರ ಪಂದ್ಯAಡ ಬೆಳ್ಯಪ್ಪ ನನ್ನನ್ನು ಗಾಂಧಿ ಹತ್ತಿರ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಅವರಿಂದ ನಾನು ಅನುಗ್ರಹ ಪಡೆದಷ್ಟು ತೃಪ್ತಿಯಾಗಿತ್ತು ಎಂದರು.

ಟಾಕಿಸ್ ಇರಬೇಕಿತ್ತು : (ಐಒಸಿ) ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸಿನಿಮಾ ಆಟೋಗ್ರಫಿ ಜ್ಞಾನ ಇದ್ದ ಕಾರಣ, ಸಿನಿಮಾ ವಿಭಾಗದಲ್ಲಿ ಜವಬ್ದಾರಿ ನಿಭಾಯಿಸುತ್ತಿದ್ದೆ. ೨ನೇ ವಿಶ್ವಯುದ್ಧ ಸಂದರ್ಭ ಯೋಧರಿಗೆ ಅರಣ್ಯದಲ್ಲಿ ಕೂಡ ಸಿನಿಮಾ ತೋರಿಸಿ, ಅವರ ಮಾನಸಿಕ ಸ್ಥೆöÊರ್ಯ ಹೆಚ್ಚಿಸುವ ಕಾರ್ಯದಲ್ಲಿ ನಾನು ಪಾಲ್ಗೊಂಡಿದ್ದೆ. ಇದರಂತೆ ೧೯೫೧ ರಲ್ಲಿ ಗೋಣಿಕೊಪ್ಪದಲ್ಲಿ ಮೊದಲು ಪ್ರಭಾತ್ ಟಾಕಿಸ್ ತೆರೆದು ಸ್ಥಳೀಯರಿಗೆ ಮೊದಲು ಸಿನೆಮಾ ತೋರಿಸಿದ ನೆನಪು ಹಂಚಿಕೊAಡರು. ಈಗ ಟಿವಿ, ಇನ್ನಿತರ ಮಾಧ್ಯಮದಿಂದಾಗಿ ಟಾಕಿಸ್ ಉಳಿದುಕೊಂಡಿಲ್ಲ. ಸ್ಥಳೀಯರಿಗೆ ಟಾಕಿಸ್ ಅವಶ್ಯ. ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗೋಣಿಕೊಪ್ಪ ಹೈಯರ್ ಪ್ರೆöÊಮರಿ ಆಡಳಿತ ಮಂಡಳಿಯಲ್ಲಿ ೧೪ ವರ್ಷ ಅಧ್ಯಕ್ಷರಾಗಿ, ನಂತರ ಕಾವೇರಿ ಕಾಲೇಜು ಆರಂಭಕ್ಕೆ ಮಂಡಳಿ ಸಭೆ ಕರೆದು ರಚಿಸುವಲ್ಲಿ ಕೂಡ ತೊಡಗಿಕೊಂಡಿದ್ದೆ. ಕಾಲೇಜು ಕೂಡ ಆರಂಭವಾಯಿತು. ಇದೀಗ ಕಾಲೇಜು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಕಾಲೇಜು ಆಡಳಿತ ಮಂಡಳಿಯಲ್ಲಿ ನನಗೆ ಖಾಯಂ ಆಹ್ವಾನಿತ ಗೌರವ ನೀಡಿದೆ. ಮಕ್ಕಳಿಗೆ ಶಿಕ್ಷಣ ಅವಶ್ಯ. ಇದಕ್ಕೆ ನಾವು ನೀಡಿದ ಕೊಡುಗೆ ಬಗ್ಗೆ ನೆನಪಿಸಿಕೊಂಡರು.

ಗೋಣಿಕೊಪ್ಪ ಪುರಸಭೆಯಾಗಿ ಪರಿವರ್ತಿಸಲಾಗಿತ್ತು. ಪುರಸಭೆ ಮೊದಲ ಅಧ್ಯಕ್ಷರಾಗಿ (೧೯೬೦-೭೪) ೧೫ ವರ್ಷ ಅಧ್ಯಕ್ಷರಾಗಿ ಸೇವೆ ನೀಡಿರುವುದು ಕುಶಿ ತಂದಿದೆ ಎಂದರು.

ಅಪ್ಪಾಜಿ ಅವರ ಪಾಲಕರಾದ ಬುಟ್ಟಿಯಂಡ ಮುತ್ತಣ್ಣ, ಬೊಳ್ಳಮ್ಮ, ಪತ್ನಿ ಚಂಬಕ್ಕಿ ಅವರನ್ನು ಈ ಸಂದರ್ಭ ನೆನಪಿಸಿಕೊಳ್ಳಲಾಯಿತು. ಪುತ್ರ ಬುಟ್ಟಿಯಂಡ ಎ. ಚಂಗಪ್ಪ, ಸೊಸೆ ನೀತಾ, ಮೊಮ್ಮಕ್ಕಳಾದ ನಿದೀಪ್, ಅನನ್ಯ ಇದ್ದರು.

ಈ ಸಂದರ್ಭ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ.ವಿ. ಅರುಣ್‌ಕುಮಾರ್, ನಿರ್ದೇಶಕರಾದ ದರ್ಶನ್ ದೇವಯ್ಯ, ಎಂ.ಎA. ಚನ್ನನಾಯಕ, ಕೆ.ಬಿ. ಜಗದೀಶ್ ಜೋಡುಬೀಟಿ, ಹೆಚ್.ಆರ್. ಸತೀಶ್ ಇದ್ದರು.