ಸೋಮವಾರಪೇಟೆ, ಜೂ. ೧೬: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘ ಮತ್ತು ಕೆವಿಬಿ ಫ್ರೆಂಡ್ಸ್ ಆಶ್ರಯದಲ್ಲಿ ದಾನಿ ರವೀಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ತಾ. ೧೯ ರಂದು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಹಾಗೂ ಅಟಲ್ಜೀ ಕನ್ನಡ ಭವನದಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ಅವರು, ೧೯ ವರ್ಷದೊಳಗಿನ ಮಕ್ಕಳಿಗೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ. ಆಟಗಾರರು ಕಡ್ಡಾಯವಾಗಿ ತಮ್ಮ ಆಧಾರ್ಕಾರ್ಡ್ ಹಾಜರುಪಡಿಸತಕ್ಕದ್ದು. ಕಬಡ್ಡಿ ವಿಜೇತ ತಂಡಕ್ಕೆ ಪ್ರಥಮ ೧೦, ದ್ವಿತೀಯ ೭, ತೃತೀಯ ೫ ಹಾಗೂ ಚತುರ್ಥ ೩ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು ಎಂದರು. ಸಂಜೆ ೬ ಗಂಟೆಗೆ ಜೇಸೀ ವೇದಿಕೆ ಮುಂಭಾಗವಿರುವ ಅಟಲ್ಜೀ ಕನ್ನಡ ಭವನದಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಕ್ರಮವಾಗಿ ಪ್ರಥಮ ಬಹುಮಾನ ರೂ. ೧೦,೦೦೦, ದ್ವಿತೀಯ ೭,೦೦೦ ಹಾಗೂ ತೃತೀಯ ೫,೦೦೦ಗಳು ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ನೃತ್ಯಕ್ಕೆ ಒಂದು ತಂಡದಲ್ಲಿ ೮ ಅಥವಾ ೧೦ ಜನರಿಗೆ ಮಾತ್ರ ಅವಕಾಶವಿದೆ ಎಂದು ತಿಳಿಸಿದರು.
ಹರಪಳ್ಳಿ ರವೀಂದ್ರ ಅವರು ಅಂದು ಬೆಳಿಗ್ಗೆ ೯.೩೦ಕ್ಕೆ ಇಲ್ಲಿನ ಕಾವೇರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ರಾತ್ರಿ ೮.೩೦ಕ್ಕೆ ಜೇಸಿ ವೇದಿಕೆಯಲ್ಲಿ ಸಾರ್ವಜನಿಕರಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೆ.ವಿ.ಬಿ. ಫ್ರೆಂಡ್ಸ್ ಅಧ್ಯಕ್ಷ ಎಸ್.ಆರ್. ಸುಮಂತ್ ಮಾಹಿತಿ ನೀಡಿದರು. ಪಂದ್ಯಾಟದ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊ: ೯೯೪೫೦೩೪೮೨೦, ೬೩೬೦೮೭೬೬೮೨ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು. ಗೋಷ್ಠಿ ಯಲ್ಲಿ ಸಂಘದ ಪದಾಧಿಕಾರಿಗಳಾದ ಎಸ್.ಕೆ ತೇಜಸ್, ಪಿ.ಎಂ. ರವಿ, ರಾಮು ಉಪಸ್ಥಿತರಿದ್ದರು.