ಕೂಡಿಗೆ, ಜೂ. ೧೭: ಸಂಕಷ್ಟದಲ್ಲಿರುವ ವಿಶೇಷಚೇತನರನ್ನು ದತ್ತು ತೆಗೆದುಕೊಂಡು ಅಗತ್ಯ ಸಹಾಯ ದೊರಕಿಸಲು ಸ್ಥಳೀಯ ವಿಶೇಷಚೇತನರ ಕ್ಷೇಮಾಭಿವೃದ್ಧಿ ಕ್ಲಬ್ ನಿರ್ಧರಿಸಿದೆ ಎಂದು ಕ್ಲಬ್ ಅಧ್ಯಕ್ಷ ಡಿ.ಕೆ. ಸುರೇಶ್ ಕುಮಾರ್ ತಿಳಿಸಿದರು.

ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಲಬ್ ವತಿಯಿಂದ ಪ್ರಥಮ ಹಂತದಲ್ಲಿ ಬುದ್ಧಿಮಾಂದ್ಯ ಮಕ್ಕಳಿರುವ ಕುಟುಂಬಕ್ಕೆ ಅಡಿಕೆ ತಟ್ಟೆ, ಬಟ್ಟಲು ತಯಾರಿಸುವ ಯಂತ್ರಗಳನ್ನು ನೀಡಲಾಗುವುದು. ಇದರಿಂದ ಆ ಕುಟುಂಬಗಳು ಆರ್ಥಿಕವಾಗಿ ಸಬಲರಾಗಲು ಸಹಾಯವಾಗುತ್ತದೆ. ಈ ಯಂತ್ರಗಳ ಮೂಲಕ ತಯಾರಿಸಿದ ಉತ್ಪನ್ನಗಳನ್ನು ಕ್ಲಬ್ ವತಿಯಿಂದಲೇ ಖರೀದಿಸಲಾಗುವುದು ಎಂದು ಹೇಳಿದರು.

ಸಮಸ್ಯೆಗಳಿಗೆ ಕಾಲ ಕಾಲಕ್ಕೆ ಸರ್ಕಾರಗಳು ಸ್ಪಂದಿಸುತ್ತಿದ್ದರೂ, ಕೊಡಗಿನಲ್ಲಿ ಅತಿಹೆಚ್ಚು ವಿಶೇಷ ಚೇತನರು ಸಂಕಷ್ಟ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ. ಆದ ಕಾರಣ ೨೬೦ಕ್ಕೂ ಹೆಚ್ಚು ಇಂತಹ ಕುಟುಂಬಗಳ ಕ್ಷೇಮಕ್ಕಾಗಿ ಕ್ಲಬ್ ಸಹಾಯ ಒದಗಿಸಲು ಸಂಕಲ್ಪಿಸಿದೆ ಎಂದರು.

ಹಿರಿಯ ಪತ್ರಕರ್ತ ಎಸಳೂರು ಉದಯಕುಮಾರ್ ಮಾತನಾಡಿ, ರಾಜ್ಯಾದ್ಯಂತ ವಿಶೇಷಚೇತನರ ಪರಿಷತ್ ವತಿಯಿಂದ ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ವಿಶೇಷಚೇತನರ ಪುನರ್ವಸತಿ ಕಾರ್ಯಕರ್ತ ಟಿ.ಸಿ. ಯೋಗೇಶ್, ವಿಶೇಷಚೇತನರ ಕ್ಲಬ್‌ನ ಪದಾಧಿಕಾರಿಗಳು ಇದ್ದರು.