ಸುಂಟಿಕೊಪ್ಪ, ಜೂ. ೧೪ : ಸುಂಟಿಕೊಪ್ಪದ ರಾಜ್ಯ ಹೆದ್ದಾರಿಯಿಂದ ಎಮ್ಮೆಗುಂಡಿ ನಾಟಿ ವೈದ್ಯರ ಮನೆಗೆ ತೆರಳುವ ರಸ್ತೆ ತೀರಾ ಹಾಳಾಗಿದ್ದು, ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ವಾಹನ ಸಂಚಾರ ಹಾಗೂ ಸಾರ್ವಜನಿಕರು ನಡೆದಾಡಲೂ ಪ್ರಯಾಸ ಪಡಬೇಕಾಗಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಎಮ್ಮೆಗುಂಡಿ ರಸ್ತೆ ಡಾಂಬರೀಕರಣ ಕಾಣದೆ ವರ್ಷಗಳೇ ಕಳೆದು ಹೋಗಿವೆ. ಮನವಿಗಳ ಮೇಲೆ ಮನವಿ ಸಲ್ಲಿಸಿದರೂ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಮಳೆಗಾಲದಲ್ಲಿ ಈ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಶಾಲಾ ಮಕ್ಕಳು, ಸಾರ್ವಜನಿಕರು ನಡೆದಾಡಲು ಸಾಧ್ಯವಾಗುತ್ತಿಲ್ಲ. ಆಟೋರಿಕ್ಷಾದವರು ಸಹ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಸುಂಟಿಕೊಪ್ಪ ಗ್ರಾಮ ಸಭೆಯಲ್ಲಿ ಹಲವಾರು ಬಾರಿ ಮನವಿ ಸಲ್ಲಿಸಿದರು ಪ್ರಯೋಜನ ಕಾಣದಂತಾಗಿದೆ. ಈ ಭಾಗದಲ್ಲಿ ಕೃಷಿಕರು, ಕೂಲಿ ಕಾರ್ಮಿಕರು ಹೆಚ್ಚಾಗಿದ್ದು ಸುಂಟಿಕೊಪ್ಪ ನಗರಕ್ಕೆ ಪ್ರಯಾಣಿಸಲು ಶಾಲಾ ಕಾಲೇಜು ಮಕ್ಕಳು, ವಯೋವೃದ್ಧರು ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ. ಸುಂಟಿಕೊಪ್ಪದಿAದ ಮಾದಾಪುರ ರಸ್ತೆಗೆ ಸಂಪರ್ಕ ಹೊಂದುವ ಈ ರಸ್ತೆಯನ್ನು ಜನ ಪ್ರತಿನಿಧಿಗಳು, ಅಧಿಕಾರಿಗಳು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.