ಮಡಿಕೇರಿ, ಜೂ. ೧೪: ಶಿಕ್ಷಣ, ಉದ್ಯೋಗ ಮತ್ತು ಸಮಾನತೆಗೆ ಆದ್ಯತೆ ನೀಡುವ ಮೂಲಕ ದೇಶದ ಜನರ ಮನೆ ಮಾತಾಗಿರುವ ಆಮ್ ಆದ್ಮಿ ಪಾರ್ಟಿ ಕೊಡಗು ಜಿಲ್ಲೆಯಲ್ಲೂ ತನ್ನ ಬಲವನ್ನು ವೃದ್ಧಿಸಿಕೊಳ್ಳಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ. ಅಪ್ಪಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೀರಾಜಪೇಟೆ ಪ.ಪಂ. ಸಭಾಭವನದಲ್ಲಿ ನಡೆದ ಪಕ್ಷದ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜಕೀಯ ಪರಿವರ್ತನೆಯ ಕಾಲ ಸನ್ನಿಹಿತ ವಾಗಿದ್ದು, ಕೊಡಗಿನಲ್ಲಿ ಆಮ್ ಆದ್ಮಿ ಪಾರ್ಟಿ ಬಲಗೊಳ್ಳಲು ಕಾರ್ಯ ಕರ್ತರ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.

ರಾಜ್ಯ ಸಾಮಾಜಿಕ ಮಾಧ್ಯಮ ನಿರ್ವಾಹಕ ಅಬ್ದುಲ್ ರಜಾಕ್ ಮಾತನಾಡಿ, ಆಮ್ ಆದ್ಮಿ ಪಕ್ಷ ಬೆಳೆದು ಬಂದ ರೀತಿ ಮತ್ತು ಎಎಪಿ ಸರಕಾರದ ಸಾಧನೆಗಳನ್ನು ವಿವರಿಸಿದರು. ಕೊಡಗಿನ ಜನ ಉನ್ನತ ಶಿಕ್ಷಣಕ್ಕಾಗಿ, ವೈದ್ಯಕೀಯ ಅವಶ್ಯಕತೆಗಳಿಗಾಗಿ ಮತ್ತು ಉದ್ಯೋಗಕ್ಕಾಗಿ ಅಕ್ಕ-ಪಕ್ಕದ ಜಿಲ್ಲೆಗಳ ಮೇಲೆ ಅವಲಂಬಿತರಾಗಬೇಕಾಗಿದೆ. ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಕೊಡಗು ಸಾಕಷ್ಟು ಅಭಿವೃದ್ಧಿಯನ್ನು ಹೊಂದಲಿದೆ ಎಂದರು.

ಪಕ್ಷದ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಪಕ್ಷವನ್ನು ಬಲ ಪಡಿಸುವ ಕುರಿತು ಕಾರ್ಯಕರ್ತರಿಗೆ ಸಲಹೆಗಳನ್ನು ನೀಡಿದರು. ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಆಮ್ ಆದ್ಮಿ ಪಾರ್ಟಿಯೊಂದಿಗೆ ಕೊಡಗಿನ ಜನ ಕೈಜೋಡಿಸಬೇಕೆಂದು ಮನವಿ ಮಾಡಿದರು. ಕಾರ್ಯಕರ್ತರುಗಳಾದ ಕೆ.ಸಿ. ವೆಂಕಟೇಶ್ ಸ್ವಾಗತಿಸಿ, ಎಂ.ಆರ್. ಮಂಜುನಾಥ್ ನಿರೂಪಿಸಿದರು. ಪ್ರಮುಖರಾದ ಹೆಚ್.ಜಿ. ಬಾಲ ಸುಬ್ರಮಣ್ಯ ವಂದಿಸಿದರು. ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಪವನ್, ಜಿಲ್ಲೆಯ ವಿವಿಧೆಡೆಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.