ಗೋಣಿಕೊಪ್ಪಲು, ಜೂ. ೧೪: ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ರಾಜ್ಯ ಸರಕಾರ ಭೂ ಮಾಲೀಕರಿಗೆ ಭೋಗ್ಯಕ್ಕೆ ನೀಡಲು ತೀರ್ಮಾನ ಕೈಗೊಂಡಿರುವುದನ್ನು ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ಹೋರಾಟ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿಯ ರಾಜ್ಯ ಸಂಚಾಲಕ ರಮೇಶ್ ಸರ್ಕಾರ ಇಂತಹ ನಿರ್ಧಾರವನ್ನು ಕೈಬಿಡಬೇಕು. ಕರ್ನಾಟಕ ಲ್ಯಾಂಡ್ ಗ್ರಾಂಟ್ ನಿಯಮದಲ್ಲಿ ಶೇಕಡವಾರು ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ್ದರೂ ಈ ಬಗ್ಗೆ ಸರಕಾರ ಮಾನ್ಯತೆ ಮಾಡುತ್ತಿಲ್ಲ. ಸರ್ಕಾರ ಕೂಡಲೇ ಪರಿಶಿಷ್ಟರಿಗೆ ಭೂಮಿಯನ್ನು ಹಂಚಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತದ ಮೂಲಕ ಸರ್ಕಾರದ ಗಮನ ಸೆಳೆಯಲು ತಾ. ೧೭ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಜಿಲ್ಲೆಯ ಪರಿಶಿಷ್ಟರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದರು. ಜಿಲ್ಲೆಯಲ್ಲಿ ಬಹುತೇಕ ಕೂಲಿ ಕಾರ್ಮಿಕರು ಪರಿಸಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುತ್ತಾರೆ. ಜನಸಂಖ್ಯಾ ಆಧಾರಿತವಾಗಿ ಶೇ. ೩೪ರಷ್ಟು ಇದ್ದು ಇವರಲ್ಲಿ ಶೇ.೨ರಷ್ಟು ಮಾತ್ರ ಸರಕಾರಿ ನೌಕರರಾಗಿದ್ದಾರೆ. ಕೆಲವು ಮಂದಿ ಮಾತ್ರ ತುಂಡು ಭೂಮಿಯನ್ನು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಸಾಕಷ್ಟು ಮಂದಿ ಇಂದಿಗೂ ಭೂ ಮಾಲೀಕರ ಲೈನ್ ಮನೆಯಲ್ಲಿ ಬದುಕು ಮುಂದುವರೆಸುತ್ತಿದ್ದಾರೆ. ಬಹುತೇಕ ಮಂದಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು ಸಾಮಾಜಿಕ ತಿಳುವಳಿಕೆಯ ಕೊರತೆಯಿದೆ. ಇವರ ಬದುಕು ಮೂರಾ ಬಟ್ಟೆಯಾಗಿದೆ.
ದಶಕಗಳಿಂದ ಲೈನ್ ಮನೆಗಳಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಸಂಘಟನೆಯು ಹಲವು ಹೋರಾಟಗಳನ್ನು ನಡೆಸಿದೆ. ಆದರೆ ಸರಕಾರವು ಇಲ್ಲಿಯ ತನಕ ಸ್ಪಂದನ ಮಾಡದೆ ಇರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಬಿ.ಕೆ. ಶಾಂತಿ, ತಾಲೂಕು ಸದಸ್ಯ ಎ.ಜೆ. ಬೋಜ ಮತ್ತಿತರರು ಹಾಜರಿದ್ದರು.