ವೀರಾಜಪೇಟೆ, ಜೂ. ೧೪: ಎಸ್.ಸಿ-ಎಸ್.ಟಿ. ವಿದ್ಯಾರ್ಥಿಗಳ ಏಳಿಗೆಗೆ ಸರ್ಕಾರದ ವತಿಯಿಂದ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಬೇಕೆಂದು ಮೂಕೊಂಡ ಶಶಿ ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ಎಸ್.ಸಿ.-ಎಸ್.ಟಿ. ಸಮಿತಿಯ ವತಿಯಿಂದ ಶಿಕ್ಷಣದ ಮಹತ್ವ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಅವರು ವಿದ್ಯಾರ್ಥಿಗಳ ಅಭಿವೃದ್ಧಿಗೆ ಕಾಲೇಜು ಮತ್ತು ಅಭಿವೃದ್ಧಿ ಸಮಿತಿಯು ಬದ್ಧವಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪೊನ್ನಂಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಶಿವದಾಸ್ ಪಿ.ಆರ್ ಅವರು ‘ಶಿಕ್ಷಣದ ಮಹತ್ವ’ ಎಂಬ ವಿಷಯವನ್ನು ಕುರಿತು ವಿಶೇಷ ಉಪನ್ಯಾಸವನ್ನು ನೀಡಿ, ನಮ್ಮ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಇರುವ ಏಕೈಕ ಮಾರ್ಗ ಎಂದರೆ ಅದು ಶಿಕ್ಷಣ. ಮೌಲ್ಯಯುತ ಶಿಕ್ಷಣವನ್ನು ಪಡೆದುಕೊಂಡರೆ ನಾವು ಪಡೆದುಕೊಳ್ಳುವ ಪದವಿಗೆ ಸಾರ್ಥಕತೆ ಸಿಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಅವರು ಮಾತನಾಡಿ ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ನಿವಾರಿಸಲು ನಮ್ಮ ಕಾಲೇಜಿನಲ್ಲಿ ಎಸ್.ಸಿ-ಎಸ್.ಟಿ ಸಮಿತಿಯನ್ನು ರಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಾಲೇಜು ಮಟ್ಟದಲ್ಲಿ ಯಾವುದೇ ಬಗೆಯ ತೊಂದರೆ ಅಥವಾ ಕೊರತೆ ಕಂಡುಬAದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ಬಗೆಹರಿಸುವ ಬದ್ಧತೆ ಕಾಲೇಜಿಗೆ ಇದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಐ.ಕ್ಯೂ.ಎ.ಸಿ. ಸಂಚಾಲಕ ವೇಣುಗೋಪಾಲ್ ಹೆಚ್.ಎಸ್, ಎಸ್.ಸಿ-ಎಸ್.ಟಿ ಸಮಿತಿಯ ಸಂಚಾಲಕ ರಘುರಾಜು ಆರ್. ಹಾಗೂ ಕಾರ್ಯಕ್ರಮ ಸಂಯೋಜಕರಾದ ಧನ್ಯ ಕೆ.ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.