ನವದೆಹಲಿ ಜೂ.೧೪: ಭಾರತೀಯ ಸೇನಾ ನೇಮಕಾತಿ ಪ್ರಕ್ರಿಯೆಗೆ ಅಗ್ನಿಪಥ್ ಯೋಜನೆ ಜಾರಿಗೊಳಿಸಲು ಇಂದು ಕೇಂದ್ರ ಸಚಿವ ಸಂಪುಟವು ಐತಿಹಾಸಿಕ ಅನುಮೋದನೆ ನೀಡಿದೆ.

ಈ ಪ್ರಮುಖ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಿಂದ ದೇಶದ ಯುವಕ, ಯುವತಿಯರಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವಂತಹ ಅವಕಾಶ ದೊರಕಲಿದೆ. ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಯುವಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ರಾಜ್‌ನಾಥ್ ಸಿಂಗ್ ಪ್ರಕಟಿಸಿದರು. ಪ್ರಾರಂಭಿಕ ೬ ತಿಂಗಳು ತರಬೇತಿ ಅವಧಿಯಾಗಿರುತ್ತದೆ. ಆ ಅವಧಿಯಲ್ಲಿ ಅವರಿಗೆ ಮಾಸಿಕ ರೂ.೩೦ ಸಾವಿರದಿಂದ ರೂ. ೪೦ ಸಾವಿರದವರೆಗೆ ವೇತನ ಹಾಗೂ ಇತರ ಭತ್ಯೆಗಳಿರುತ್ತವೆ.

(ಮೊದಲ ಪುಟದಿಂದ) ನಾಲ್ಕು ವರ್ಷಗಳಾದ ನಂತರ ಆ ಪೈಕಿ ಶೇ. ೨೫ ರಷ್ಟು ಮಂದಿಗೆ ಮುಂದೆ ೧೫ ವರ್ಷಗಳ ಕಾಲ ಅಧಿಕಾರೇತರ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವ ಅವಕಾಶವಿರುತ್ತದೆ.

ಅಗ್ನಿಪಥ್ ನೇಮಕಾತಿ ಯೋಜನೆಯು ಪರಿವರ್ತಕ ಉಪಕ್ರಮವಾಗಿದ್ದು ಅದು ಸಶಸ್ತç ಪಡೆಗಳಿಗೆ ಯುವ ಸಹಯೋಗವನ್ನು ಒದಗಿಸುತ್ತದೆ. ಅಂತೆಯೇ ಈ ಯೋಜನೆಯೊಂದಿಗೆ ಯೋಧರು ಕೆಲಸವನ್ನು ತೊರೆಯುವಾಗ ಸೇವಾ ನಿಧಿ ಪ್ಯಾಕೇಜ್ ಅನ್ನು ಪಡೆಯಲಿದ್ದು, ನಾಲ್ಕು ವರ್ಷಗಳ ಕಾಲ ಸೇನೆಗೆ ಯುವಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಯಾವುದೇ ವ್ಯಕ್ತಿಯು ಜೀವನದಲ್ಲಿ ಒಮ್ಮೆಯಾದರೂ ಸೇನೆಯ ಸಮವಸ್ತç ಧರಿಸಬೇಕೆಂಬ ಹಂಬಲ ಹೊಂದಿರುತ್ತಾರೆ. ಹಾಗೆಯೇ ಈ ಸೈನಿಕರು ಹೊಸ ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಆರೋಗ್ಯ ಹಾಗೂ ದೇಹದಾರ್ಢ್ಯತೆ ಕಡೆಗೆ ಹೆಚ್ಚು ಒತ್ತು ನೀಡಲಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ನಿರುದ್ಯೋಗ ಸಮಸ್ಯೆ ದೂರವಾಗಲಿದೆ. ಭಾರತೀಯ ಅರ್ಥ ವ್ಯವಸ್ಥೆಯೂ ಸುಧಾರಿಸಲಿದೆ ಎಂದೂ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

ಭಾರತೀಯ ಸೇನೆಯಲ್ಲಿ ನೇಮಕಾತಿಯನ್ನು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಲ್ಲಿ ಮಾಡಲಾಗುತ್ತಿದ್ದು, ಈ ಯೋಜನೆಯಲ್ಲಿ, ದೇಶದ ಎಲ್ಲಾ ಮೂರು ಸೇನೆಗಳಾದ ನೌಕಾಪಡೆ, ಭೂಸೇನೆ, ವಾಯುಸೇನೆಗಳ ಸೈನಿಕರು ಕೇವಲ ಆರು ತಿಂಗಳ ತರಬೇತಿಯೂ ಸೇರಿದಂತೆ ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ನಿವೃತ್ತಿ ಮತ್ತು ಪಿಂಚಣಿ ರೂಪದಲ್ಲಿ ಸರ್ಕಾರಕ್ಕೆ ಯಾವುದೇ ಹೊರೆ ಇರುವುದಿಲ್ಲ. ಸೇನೆಗೆ ಸೇರಲು ಬಯಸುವ ಎಲ್ಲಾ ಯುವಕರಿಗೂ ಅವಕಾಶ ನೀಡಲಾಗುವುದು. ಈಗ ಸರ್ಕಾರವು ಕೇವಲ ೪ ವರ್ಷಕ್ಕೆ ಸೈನಿಕರನ್ನು ಆಯ್ಕೆ ಮಾಡುತ್ತದೆ ಮತ್ತು ಈ ಸಮಯದಲ್ಲಿ ಅವರು ವಿವಿಧ ಕ್ಷೇತ್ರಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಈ ಕುರಿತು ಮಾತನಾಡಿದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು, ಈ ಯೋಜನೆಯು ಸಶಸ್ತç ಪಡೆಗಳಲ್ಲಿ ನೇಮಕಾತಿಗಾಗಿ ವ್ಯಾಪಕವಾದ ಪ್ರತಿಭಾ ಪ್ರವಾಹವನ್ನೇ ಹರಿಸುತ್ತದೆ. "ಅಗ್ನಿಪಥ್" ಯೋಜನೆಯನ್ನು ಮೊದಲು "ಟೂರ್ ಆಫ್ ಡ್ಯೂಟಿ" ಎಂದು ನಾಮಕರಣ ಮಾಡಲಾಗಿತ್ತು. ಇದನ್ನು ಮೂರು ಸೇನೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ಪ್ರಾರಂಭಿಸಲಾಯಿತು ಎಂದು ಹೇಳಿದರು.

ಅಗ್ನಿವೀರರು : ದೇಶದಲ್ಲಿ ಕೋವಿಡ್ ೧೯ ರಂತಹ ಸಾಂಕ್ರಾಮಿಕ ರೋಗದಿಂದಾಗಿ, ಮಿಲಿಟರಿ ನೇಮಕಾತಿ ಕಡಿಮೆಯಾಗಿದ್ದು, ನಮ್ಮ ದೇಶದಲ್ಲಿ ಸೇನಾ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ದೇಶದ ಮೂರು ಸೇನೆಗಳಲ್ಲಿ ೧.೨೫ ಲಕ್ಷಕ್ಕೂ ಹೆಚ್ಚು ಉದ್ಯೋಗ ಖಾಲಿ ಇವೆ. ಅಗ್ನಿಪಥ್ ಯೋಜನೆಯಲ್ಲಿ ಸೇನೆಗೆ ನೇಮಕಗೊಳ್ಳುವ ಯೋಧರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿನ ಕ್ರಾಂತಿಕಾರಿ ಬದಲಾವಣೆಗಳು ಆರಂಭದಲ್ಲಿ ನಾಲ್ಕು ವರ್ಷಗಳ ಅವಧಿಗೆ ಸೈನಿಕರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಅವರಲ್ಲಿ ಕೆಲವರನ್ನು ಉಳಿಸಿಕೊಳ್ಳಲಾಗುವುದು.

ಪ್ರಸ್ತುತ, ನಾಲ್ಕು ವರ್ಷಗಳಲ್ಲಿ ಒಟ್ಟು ರೂ. ೧೧ ಲಕ್ಷದಿಂದ ರೂ. ೧೨ ಲಕ್ಷಗಳವರೆಗೆ ವೇತನ ಪ್ಯಾಕೇಜ್ ಇರುತ್ತದೆ. ಆದರೆ, ನಿವೃತ್ತಿ ವೇತನ ಇರುವುದಿಲ್ಲ. ಕರ್ತವ್ಯ ನಿರತ ಸಾವಿಗೀಡಾದರೆ ಅಥವಾ ಅಂಗ ವೈಕಲ್ಯವುಂಟಾದರೆ ಆರ್ಥಿಕ ನೆರವು ಲಭ್ಯವಿರುತ್ತದೆ,

ಪ್ರಸಕ್ತ ಸಾಲಿನಲ್ಲಿ ೪೫,೦೦೦ ಮಂದಿ ಅಗ್ನಿವೀರರನ್ನು ನೇಮಿಸಲಾಗುವುದು ಎಂದು ಭೂಸೇನಾ ಮುಖ್ಯಸ್ಥ ಮನೋಜ್ ಪಾಂಡೆ ತಿಳಿಸಿದರು. ಅಗ್ನಿವೀರರಾಗಲು ಅರ್ಹತೆ:೧೭.೫ ರಿಂದ ೨೧ ವಯೋಮಿತಿ, ಈ ವರ್ಷದ ನೇಮಕಾತಿ ಪ್ರಕ್ರಿಯೆ ಮುಂದಿನ ೯೦ ದಿನದಲ್ಲಿ ಪ್ರಾರಂಭವಾಗಿ ೨೦೨೩ ರ ಜುಲೈಗೆ ಪೂರ್ಣಗೊಳ್ಳುವುದು. ಆನ್‌ಲೈನ್‌ನಲ್ಲಿಯೇ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ವಿದ್ಯಾರ್ಹತೆ ಇತರ ಅರ್ಹತೆಗಳು ಸೈನ್ಯಕ್ಕೆ ಭರ್ತಿ ಮಾಡುವ ಪ್ರಕ್ರಿಯೆಗೆ ಪೂರಕವಾಗಿರುತ್ತದೆ, ಯುವಕರು ಮಾತ್ರವಲ್ಲದೆ ಯುವತಿಯರಿಗೂ ಅವಕಾಶವಿದೆ.