ಸೋಮವಾರಪೇಟೆ, ಜೂ. ೧೪: ಒಕ್ಕಲಿಗ ಸಮುದಾಯ ಕೃಷಿ ಹಿನ್ನೆಲೆ ಹೊಂದಿದ್ದು, ಕೃಷಿಯೊಂದಿಗೆ ಸಮಾಜದಲ್ಲಾಗುತ್ತಿರುವ ಸಾಮಾಜಿಕ ಬದಲಾವಣೆಗಳತ್ತಲೂ ಗಮನಹರಿಸ ಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘವು ೫೦ ವರ್ಷಗಳನ್ನು ಪೂರೈಸಿದ್ದು, ಸಂಘದ ಸುವರ್ಣ ಮಹೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಹಿಂದೆ ಇದ್ದ ಗಂಗ ಸಾಮ್ರಾಜ್ಯ ಸಂದರ್ಭ ಒಕ್ಕಲಿಗರೆಲ್ಲರೂ ಒಂದೇ ಆಗಿದ್ದರು. ಆ ನಂತರದಲ್ಲಿ ವಿವಿಧ ಪಂಗಡಗಳಾಗಿ ಹರಿದು ಹಂಚಿ ಹೋಗಿದ್ದಾರೆ. ಇದೀಗ ೧೨೮ ಒಕ್ಕಲಿಗ ಪಂಗಡಗಳಿವೆ. ಎಲ್ಲಾ ಉಪ ಪಂಗಡಗಳೂ ಸಹ ಒಂದಾಗಬೇಕು. ಆ ಮೂಲಕ ಒಕ್ಕಲಿಗ ಸಮುದಾಯ ಸಂಘಟನೆಗೊಳ್ಳಬೇಕು ಎಂದು ಸ್ವಾಮೀಜಿ ಅಭಿಪ್ರಾಯಿಸಿದರು.

ತಾಯಂದಿರನ್ನು ಕೇವಲ ಮನೆ ಕಟ್ಟುವ ಕೆಲಸಕ್ಕೆ ಮಾತ್ರ ಸೀಮಿತಗೊಳಿಸದೇ ದೇಶ ಕಟ್ಟುವ ಕಾರ್ಯದಲ್ಲಿ

(ಮೊದಲ ಪುಟದಿಂದ) ತೊಡಗಿಸಿಕೊಳ್ಳುವಂತಹ ಅವಕಾಶ ಒದಗಿಸಬೇಕು. ಆಗ ಮಾತ್ರ ಭಾರತ ಬಲಿಷ್ಠವಾಗಲಿದೆ. ತಾಯಂದಿರನ್ನು ಕೇವಲ ಮನೆಗೆ ಮಾತ್ರ ಸೀಮಿತಗೊಳಿಸಬಾರದು ಎಂದು ಕಿವಿಮಾತು ಹೇಳಿದ ಸ್ವಾಮೀಜಿ, ಸಮುದಾಯದ ವಿವಿಧ ಸಂಘಟನೆಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರ ಕಲಿಸಬೇಕು ಎಂದರು.

ಕರ್ನಾಟಕದ ಆದಾಯದ ಶೇ.೬೦ರಷ್ಟು ಪಾಲನ್ನು ರಾಜ್ಯದ ರಾಜಧಾನಿ ಬೆಂಗಳೂರು ನೀಡುತ್ತಿದೆ. ಇದೇ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಇವರೊಂದಿಗೆ ಇಂದಿಗೂ ಹಲವಷ್ಟು ಒಕ್ಕಲಿಗ ಮುಖಂಡರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರುಗಳ ಸೇವೆಯನ್ನೂ ಸಮಾಜ ಸ್ಮರಿಸಬೇಕು ಎಂದು ಸ್ವಾಮೀಜಿ ನುಡಿದರು.

ಸಭಾ ಭವನವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಮುದಾಯ ಬಾಂಧವರು ಸಂಕುಚಿತ ಮನೋಭಾವದಿಂದ ಹೊರಬರಬೇಕು. ತಮ್ಮ ಕಾರ್ಯಗಳ ಮೂಲಕ ಸಮಾಜಕ್ಕೆ ಗೌರವ ತರಬೇಕು. ಒಕ್ಕಲಿಗರ ಸಂಘದ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ವಾಚನಾಲಯ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಅನುದಾನ ಒದಗಿಸಲಾ ಗುವುದು ಎಂದು ಭರವಸೆ ನೀಡಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭ ಕುವೆಂಪು ಅವರಿಗೆ ಅಗೌರವ ತೋರಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದು, ಯಾವದೇ ರೀತಿಯಲ್ಲೂ ಸರ್ಕಾರ ದಿಂದ ಅನ್ಯಾಯ ಆಗಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಅವರು ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಎಂಬ ಗೀತೆಯನ್ನು ನಾಡಗೀತೆಯನ್ನಾಗಿ ಘೋಷಣೆ ಮಾಡಿದ್ದಾರೆ. ಹಾಗೆಯೇ ರೈತ ಗೀತೆಗೂ ಮಾನ್ಯತೆ ನೀಡಿದ್ದಾರೆ ಎಂದು ಸ್ಮರಿಸಿದರು.

೨೦೧೬ರಲ್ಲಿ ಪಠ್ಯಪುಸ್ತರ ಪರಿಷ್ಕರಣೆ ಸಂದರ್ಭ ೧ ರಿಂದ ೧೦ನೇ ತರಗತಿವರೆಗೆ ಕುವೆಂಪು ಅವರ ವಿಚಾರಧಾರೆಗಳಿತ್ತು. ಆದರೆ ೨೦೧೮ರಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವ ಸಮಿತಿ ಒಂದರಿAದ ೭ನೇ ತರಗತಿಗೆ ಪಾಠವನ್ನು ಇಳಿಸಲಾಯಿತು. ಇದೀಗ ೧ ರಿಂದ ೧೦ನೇ ತರಗತಿವರೆಗೆ ಕುವೆಂಪು ಅವರ ಗದ್ಯ ಹಾಗೂ ಪದ್ಯವನ್ನು ಸೇರಿಸಲಾಗಿದೆ. ರಾಜ್ಯ ಸರ್ಕಾರದಿಂದ ಒಕ್ಕಲಿಗ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಸಂಘಟನೆಗಳು ತಮ್ಮ ಸಮುದಾಯದ ಏಳಿಗೆಗೆ ಶ್ರಮಿಸಬೇಕು. ಸೋಮವಾರಪೇಟೆಯ ಒಕ್ಕಲಿಗರ ಸಂಘವು ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಮುದಾಯಕ್ಕೆ ಒಳಿತನ್ನು ಮಾಡುತ್ತಾ ಬಂದಿದೆ ಎಂದರು.

ಬೆAಗಳೂರಿನಲ್ಲಿರುವ ಒಕ್ಕಲಿಗರ ಸಂಘದ ನಿವೇಶನವನ್ನು ಖಾಸಗಿ ವ್ಯಕ್ತಿಯೋರ್ವರು ಕಬಳಿಸುವ ಹುನ್ನಾರ ನಡೆಸಿದ್ದ ಸಂದರ್ಭ, ರಾಜ್ಯ ಅರ್ಜಿ ಸಮಿತಿಗಳ ಅಧ್ಯಕ್ಷನಾಗಿದ್ದ ತಾನು ಯಾವುದೇ ಪ್ರಭಾವಕ್ಕೆ ಒಳಗಾಗದೇ ಸುಮಾರು ೮೦೦ ಕೋಟಿ ಮೌಲ್ಯದ ಆಸ್ತಿಯನ್ನು ಸಂಘಕ್ಕೆ ಉಳಿಸಿಕೊಟ್ಟಿದ್ದೇನೆ ಎಂದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಒಕ್ಕಲಿಗರ ನಿಗಮದ ೨ ನಿರ್ದೇಶಕ ಸ್ಥಾನವನ್ನು ಕೊಡಗಿಗೆ ನೀಡಬೇಕೆಂದು ಸಚಿವ ಅಶೋಕ್ ಅವರಲ್ಲಿ ಮನವಿ ಮಾಡಿದ್ದು, ನಿಗಮದಿಂದ ಲಭಿಸುವ ಸೌಲಭ್ಯಗಳನ್ನು ಸಮುದಾಯ ಬಾಂಧವರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಆಧುನಿಕ ಯುಗದಲ್ಲಿ ಬದುಕು ನಾಗಾಲೋಟದಲ್ಲಿ ಸಾಗುತ್ತಿದ್ದರೂ ನಮ್ಮ ನೆಲದ ಸಂಸ್ಕೃತಿ, ಆಚಾರ ವಿಚಾರಗಳನ್ನು ಬಿಡಬಾರದು. ಮಕ್ಕಳಲ್ಲಿ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಅಭಿಪ್ರಾಯಿಸಿದರು.

ಮಾಜೀ ಸಚಿವ ಬಿ.ಎ. ಜೀವಿಜಯ, ಎಂಎಲ್‌ಸಿ ಬೋಜೇಗೌಡ ಅವರುಗಳು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ನಡೆದು ಬಂದ ಹಾದಿಯನ್ನು ವಿವರಿಸಿದರು.

ವೇದಿಕೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಉದ್ಯಮಿ ಬಿ.ವಿ. ರಾಮಚಂದ್ರ, ಒಕ್ಕಲಿಗರ ನಿಗಮದ ನಿರ್ದೇಶಕಿ ಸುರಭಿ ರಘು, ಮಾಜೀ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ, ಕಾಂಗ್ರೆಸ್ ಮುಖಂಡ ಮಂಥರ್‌ಗೌಡ, ಜಿ.ಪಂ. ಮಾಜೀ ಸದಸ್ಯೆ ಕೆ.ಪಿ. ಚಂದ್ರಕಲಾ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ದಾನಿಗಳಾದ ಸಿ.ಕೆ. ರಾಘವ, ಸುದೇವ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ವಿವೇಕಾನಂದ ವೃತ್ತದಿಂದ ಒಕ್ಕಲಿಗರ ಸಮುದಾಯ ಭವನದವರೆಗೆ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಶಾಖಾ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ಅವರುಗಳನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಸಮುದಾಯ ಭವನಕ್ಕೆ ಕರೆತರಲಾಯಿತು.