ಸಿದ್ದಾಪುರ, ಜೂ. ೧೪: ಕಳೆದ ಕೆಲವು ವರ್ಷಗಳಿಂದ ಕೊಡಗಿನ ಆದಿವಾಸಿ ಜನಾಂಗಗಳ ಅಭ್ಯುದಯ ಕ್ಕಾಗಿ ನಿರಂತರ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿರುವ ನಮ್ಮ ಕೊಡಗು ತಂಡ ಮತ್ತು ಬನವಾಸಿ ಕನ್ನಡಿಗರ ಸಂಸ್ಥೆಯು ಈ ಬಾರಿ ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಒಳಪಡುವ ಚೆನ್ನಂಗಿ ಮತ್ತು ತಿತಿಮತಿ ಭಾಗದ ದೇವರಪುರ ಸರಕಾರಿ ಶಾಲೆಯ ಸುಮಾರು ೯೦ ವಿದ್ಯಾರ್ಥಿ ಗಳಿಗೆ ಶಾಲಾ ಪರಿಕರಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಬನವಾಸಿ ಕನ್ನಡಿಗರ ಸಂಸ್ಥೆಯ ಅಧ್ಯಕ್ಷÀ ಜೈಕಿರಣ್ ಮಾತನಾಡಿ, ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ದಿನದಿಂದಲೂ ನಮ್ಮ ಕೊಡಗು ತಂಡದೊಡಗೂಡಿ ನಮ್ಮ ಸಂಸ್ಥೆಯು ಕೊಡಗಿನಲ್ಲಿ ಸೇವಾಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಅದರ ಮುಂದುವರೆದ ಭಾಗವಾಗಿ ಮಕ್ಕಳಿಗೆ ಶಾಲಾ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದರು. ನಮ್ಮ ಕೊಡಗು ತಂಡದ ಸಂಸ್ಥಾಪಕ ಅಧ್ಯಕ್ಷರಾದ ನೌಶಾದ್ ಜನ್ನತ್ ಮಾತನಾಡಿ, ಕೊಡಗಿನ ಜನ ಮತ್ತು ಆದಿವಾಸಿ ಜನಾಂಗಗಳನ್ನು ತೋರಿಸಿ ಹಣ ಮಾಡುವ ದಂದೆಗಿಳಿದಿರುವ ಕಪಟ ಸಂಘಟನೆಗಳ ನಡುವೆ ಈ ರೀತಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಮ್ಮ ಸಂಸ್ಥೆಗಳು ಜಂಟಿಯಾಗಿ ಸಹಾಯ ಮಾಡುತ್ತಿರುವುದು ನೆಮ್ಮದಿ ತಂದಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬನವಾಸಿ ಸಂಸ್ಥೆಯ ಕಿರಣ್ ಮಹಿ ಶರ್ಮ, ಶಮಂತ್ ಹೊಸಹೊಳಲು, ನಮ್ಮ ಕೊಡಗು ತಂಡದ ಲೋಹಿತ್ ಮತ್ತು ಮೋಹನ್ ಉಪಸ್ಥಿತರಿದ್ದರು.