ಮಡಿಕೇರಿ, ಜೂ. ೧೪: ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕಗಳನ್ನು ಕೈಬಿಟ್ಟು, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಬೇಕೆಂದು ಒತ್ತಾಯಿಸಿ ತಾ. ೧೭ ರಂದು ಸಹಮತ ವೇದಿಕೆ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ಟಿ.ಪಿರಮೇಶ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧ ಗಂಟೆಗೆ ನಗರದ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದರು.

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸರಕಾರದ ಅಧಿಕೃತ ಆದೇಶ ಇಲ್ಲದೆ ಪಠ್ಯ ಪರಿಷ್ಕರಣೆ ಮಾಡಿರು ವುದು ಕಾನೂನಿಗೆ ವಿರುದ್ಧವಾದ ಪ್ರಕ್ರಿಯೆಯಾಗಿದೆ ಎಂದು ಆರೋಪಿ ಸಿದ ರಮೇಶ್, ಹಿರಿಯ ಶಿಕ್ಷಣ ತಜ್ಞರ ಸಲಹೆಗಳನ್ನು ಪಡೆಯುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.

ಸಂಶೋಧಕ, ವಿಮರ್ಶಕ, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಸಮಿತಿ ಸುಮಾರು ಎರಡೂವರೆ ವರ್ಷಗಳ ಸುದೀರ್ಘ ಅಧ್ಯಯನ ನಡೆಸಿ ಪಠ್ಯಪುಸ್ತಕ ಪ್ರಕಟಿಸಿತ್ತು. ಆದರೆ ಇಂದಿನ ಸಮಿತಿ ಅಲ್ಪ ಕಾಲದಲ್ಲಿ ಅತಿ ಅವಸರದಿಂದ ಪÀರಿಷ್ಕರಣೆ ಮಾಡಿದ ಪಠ್ಯಪುಸ್ತಕ ಸಂಪೂರ್ಣ ಗೊಂದಲಮಯವಾಗಿದೆ ಎಂದು ಟೀಕಿಸಿದರು.

ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣದಲ್ಲಿ ಶಿಕ್ಷಣ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಸ್ವಪ್ರತಿಷ್ಠೆ ಬಿಟ್ಟು ಮಕ್ಕಳ ಭವಿಷ್ಯದತ್ತ ಗಮನ ಹರಿಸಿ ಈ ಹಿಂದಿನ ಪಠ್ಯ ಪುಸ್ತಕವನ್ನೇ ಮುಂದುವರೆಸಬೇಕೆAದು ಒತ್ತಾಯಿಸಿದರು.

ಈಗಿನ ಪಠ್ಯ ಪುಸ್ತಕದಲ್ಲಿ ಸಾಕಷ್ಟು ತಪ್ಪುಗಳಿವೆ ಎಂದು ರಾಜ್ಯದ ಶಿಕ್ಷಣ ತಜ್ಞರು, ಸ್ವಾಮೀಜಿಗಳು, ವಿದ್ವಾಂಸರು, ಸಾಹಿತಿಗಳು, ಕವಿಗಳು, ಸಮಾಜ ಸುಧಾರಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸರ್ವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸುದೀರ್ಘ ಅಧ್ಯಯನ ನಡೆಸಿ ಗೊಂದಲ ರಹಿತ ಪಠ್ಯವನ್ನು ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಈ ಹಿಂದಿನ ಪುಸ್ತಕಗಳನ್ನೇ ಮುಂದುವರೆಸಬೇಕೆAದು ಟಿ.ಪಿ. ರಮೇಶ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಸದಸ್ಯರುಗಳಾದ ಬಿ.ಎಂ. ಮುದ್ದಯ್ಯ, ಅಂಬೆಕಲ್ ನವೀನ್, ಕೆ.ಜಿ. ಪೀಟರ್ ಹಾಗೂ ಹೆಚ್.ಎಸ್. ಪ್ರೇಮ್‌ಕುಮಾರ್ ಉಪಸ್ಥಿತರಿದ್ದರು.