ಸುಂಟಿಕೊಪ್ಪ, ಜೂ.೧೪: ಮಾದಾಪುರ ಗ್ರಾಮ ಪಂಚಾಯಿತಿಯ ಹದಗೆಟ್ಟ ತೀರಾ ಹಾಳಾದ ರಸ್ತೆಗೆ ಕಾಯಕಲ್ಪ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪಂಚಾಯಿತಿಯ ವಾರ್ಡಿನ ಕುಂಬೂರು ೩ ರ ದೊಡ್ಡಿಬಾಣೆ, ಚರ್ಚ್ ರಸ್ತೆ ಕಳೆದ ವರ್ಷದಿಂದ ಗುಂಡಿ ಬಿದ್ದು, ಡಾಮರು ಕಿತ್ತು ಹದಗೆಟ್ಟು ಹೋಗಿದ್ದು ಸಾರ್ವಜನಿಕರು ಶಾಲಾ ಮಕ್ಕಳು ನಡೆದಾಡದಂತಾಗಿದೆ. ವಾಹನಗಳು ಸಹ ಈ ರಸ್ತೆಯಲ್ಲಿ ಸಂಚರಿಸುತ್ತಿಲ್ಲ ಆಟೋ ರಿಕ್ಷಾದವರನ್ನು ಕರೆದರೂ ಈ ರಸ್ತೆ ಕಡೆ ಬರುವುದಿಲ್ಲ ಎಂಬ ಉತ್ತರ ನೀಡುತ್ತಾರೆ. ಗ್ರಾಮ ಪಂಚಾಯಿತಿಗೆ, ಹಿಂದಿನ ಜಿ.ಪಂ., ತಾ.ಪಂ, ಸದಸ್ಯರುಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿದ್ದು, ಅವರು ೩ ತಿಂಗಳ ಹಿಂದೆ ಮಾದಾಪುರ ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು ಹಾಗೂ ಇಂಜಿನಿಯರ್ ಅವರೊಂದಿಗೆ ಬಂದು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ ಇದುವರೆಗೆ ರಸ್ತೆ ಕಾಮಗಾರಿ ಆರಂಭಿಸಿಲ್ಲ. ಇನ್ನು ಮಳೆ ಬಂದರೆ ಈ ರಸ್ತೆಯಲ್ಲಿ ನಡೆೆದಾಡಲೇ ಸಾಧ್ಯವಾಗುವುದಿಲ್ಲ ಎಂದು ಈ ವಿಭಾಗದ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ದೊಡ್ಡಿ ಬಾಣೆಯಲ್ಲಿ ೧ ಅಂಗನವಾಡಿ ಕೇಂದ್ರವೂ ಕಾರ್ಯಾಚರಿಸುತ್ತಿದೆ. ಪುಟಾಣಿ ಮಕ್ಕಳು ಗುಂಡಿ ಬಿದ್ದು ಕಲ್ಲು ಎದ್ದು ಹೋದ ರಸ್ತೆಯಲ್ಲಿ ಬರಲು ಪರದಾಡುತ್ತಿದ್ದಾರೆ. ತಕ್ಷಣವೇ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಿ ರಸ್ತೆ ದುರಸ್ತಿಗೆ ಕ್ರಮ ವಹಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.