ಮಡಿಕೇರಿ, ಜೂ. ೧೩: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಮ್ಮದೇ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸಿದೆ ಎಂದು ಕೊಡಗು ಜಿಲ್ಲಾ ಜೆಡಿಎಸ್ ಆರೋಪಿಸಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಪ್ರತೀ ಹಂತದಲ್ಲಿ ಮೋಸಗೊಳಿಸುತ್ತಿದೆ. ನಿಜವಾಗಿಯೂ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಪರವಾಗಿ ಇದ್ದಿದ್ದರೆ ರಾಜ್ಯಸಭೆ ಚುನಾವಣೆಯಲ್ಲಿ ಮೊದಲ ಪ್ರಾಶಾಸ್ತö್ಯದ ಮತವನ್ನು ತಮ್ಮ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿ ಪರವಾಗಿ ಚಲಾಯಿಸಬೇಕಿತ್ತು ಎಂದು ಹೇಳಿದರು.

ಜೆಡಿಎಸ್ ಪಕ್ಷವನ್ನು ಬಿಜೆಪಿಯ ‘ಬಿ’ ಟೀಂ ಎಂದು ಕಾಂಗ್ರೆಸ್ ಕರೆಯುತ್ತದೆ. ಆದರೆ ಬಿಜೆಪಿಯ ನಿಜವಾದ ‘ಬಿ’ ಟೀಂ ಕಾಂಗ್ರೆಸ್ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಹೇಳಿದ ಗಣೇಶ್, ಜೆಡಿಎಸ್ ಅಲ್ಪಸಂಖ್ಯಾತರ ಪರವಾಗಿರುವ ಏಕೈಕ ಪಕ್ಷವಾಗಿದೆ ಎಂದು ನುಡಿದರು.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಕಮಲ ಕಾಂಗ್ರೆಸ್ಸಿಗರಿAದಲೇ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಕಳೆದ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲುವ ಅವಕಾಶವಿದೆ ಈ ಹಿನ್ನೆಲೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮುಸ್ಲಿಂ ಸಮುದಾಯದ ನಾಯಕರ ಒತ್ತಡ ಬಂದ ಕಾರಣ ಜೆಡಿಎಸ್ ವರಿಷ್ಠರ ಸೂಚನೆಯಂತೆ ತಾನು ಸ್ಪರ್ಧೆಯಿಂದ ಹಿಂದೆ ಸರಿದರೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಸೋಲನುಭವಿಸಲು ಕಮಲ ಕಾಂಗ್ರೆಸ್ಸಿಗರೇ ಕಾರಣ ಎಂದು ಹೇಳಿದರು. ವೀರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸದಸ್ಯರಾಗುವುದೇ ಉತ್ತಮ ಎಂದು ನುಡಿದರು.

ಗೋಷ್ಠಿಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಮತೀನ್, ವೀರಾಜಪೇಟೆ ನಗರ ಘಟಕದ ಅಧ್ಯಕ್ಷ ಯೋಗೇಶ್ ನಾಯ್ಡು, ವೀರಾಜಪೇಟೆ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜೀದ್ ಉಪಸ್ಥಿತರಿದ್ದರು.