ಸೋಮವಾರಪೇಟೆ, ಜೂ. ೧೩: ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದು, ವಿಶ್ವಕ್ಕೆ ಮಾದರಿಯಾಗಿ ಭಾರತ ಮುನ್ನಡೆಯುತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಅಭಿಪ್ರಾಯಿಸಿದರು.

ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ವಿಕಾಸ ತೀರ್ಥ ಬೈಕ್ ರ‍್ಯಾಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಲ್ಲಿನ ಜೇಸೀ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ೮ ವರ್ಷಗಳಿಂದ ದೇಶದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಈವರೆಗೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲ. ಜನಸಾಮಾನ್ಯರಿಗೆ ಹತ್ತು ಹಲವು ಯೋಜನೆಗಳ ಮೂಲಕ ಸೌಲಭ್ಯ ತಲುಪಿಸುತ್ತಿರುವ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಯುವ ಮೋರ್ಚಾ ಕಾರ್ಯಕರ್ತರು ಪ್ರತಿ ಮನೆಗೂ ತಲುಪಿಸಬೇಕು ಎಂದು ರಂಜನ್ ಕರೆ ನೀಡಿದರು.

ನೋಟ್ ಅಮಾನ್ಯದ ಮೂಲಕ ಅಕ್ರಮ ಹಣಕ್ಕೆ ಕಡಿವಾಣ, ಕಾಶ್ಮೀರದ ಸಮಸ್ಯೆ ಬಗೆಹರಿಸಲು ಆರ್ಟಿಕಲ್ ೩೭೦ ರದ್ದು, ಮುದ್ರಾ ಯೋಜನೆ, ಜನ್‌ಧನ್, ಉಜ್ವಲ ಯೋಜನೆಯ ಮೂಲಕ ಕೋಟ್ಯಂತರ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವಿತರಣೆ, ಫಸಲ್ ಭೀüಮಾ ಯೋಜನೆ, ಕೃಷಿ ಸಮ್ಮಾನ್ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರದಡಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಪ್ರಾಯಿಸಿದರು.

ಇದರೊಂದಿಗೆ ಭಾರತದ ಪ್ರಾಚೀನ ಪರಂಪರೆಯಾದ ಯೋಗವನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿ, ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಭಾರತವು ವಿಶ್ವಗುರುವಾಗುವತ್ತ ಹೆಜ್ಜೆ ಇರಿಸುತ್ತಿದ್ದು, ಕೊರೊನಾ ಸಂದರ್ಭ ದೇಶದ ಪ್ರತಿ ನಾಗರಿಕರಿಗೂ ಉಚಿತ ಲಸಿಕೆ ನೀಡಿದೆ. ಆರೋಗ್ಯ ಕ್ಷೇತ್ರದ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ರಂಜನ್ ಹೇಳಿದರು.

ಮೋದಿ ಸರ್ಕಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಮುಖಂಡರು ಒಂದಿಲ್ಲೊAದು ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಪಕ್ಷದ ರಾಷ್ಟç ಮುಖಂಡರು ಇಂದಿಗೂ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೂ ಸಹ ಅಕ್ರಮ ಆಸ್ತಿ ಗಳಿಕೆಯ ಮೂಲಕ ಜೈಲಿಗೆ ಹೋಗಿ ಬಂದು ಇದೀಗ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವ ಮೋದಿ ವಿರುದ್ಧ ಆರೋಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ೮ ವರ್ಷಗಳು ಪೂರೈಸಿರುವ ಹಿನ್ನೆಲೆ ಯುವ ಮೋರ್ಚಾದಿಂದ ವಿಕಾಸ ತೀರ್ಥ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಯುವ ಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹೇರೂರು ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಮಹೇಶ್ ತಿಮ್ಮಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ನಗರಾಧ್ಯಕ್ಷ ಸೋಮೇಶ್, ಯುವ ಮೋರ್ಚಾ ನಗರಾಧ್ಯಕ್ಷ ಸಾಗರ್, ಪ್ರಭಾರಿ ಗೌತಮ್, ರೂಪಾ ಸತೀಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪಟ್ಟಣದ ಮುತ್ತಪ್ಪ ದೇವಾಲಯದಿಂದ ಪ್ರಮುಖ ಮಾರ್ಗಗಳಲ್ಲಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು.