ಮಡಿಕೇರಿ, ಜೂ. ೧೨: ದುಬಾರೆ ಸಾಕಾನೆ ಶಿಬಿರದ ಬಳಿ ಇರುವ ಹಾಡಿಗಳಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳು ನಿರ್ವಹಣೆ ಇಲ್ಲದೆ ಉಪಯೋಗಕ್ಕೆ ಬಾರದಂತಾಗಿದೆ. ಸೋಲಾರ್ ದೀಪಗಳು ನಿರ್ವಹಣೆ ಇಲ್ಲದೆ ದುರಸ್ತಿಗೀಡಾಗಿವೆ. ಹಾಡಿ ವಾಸಿಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ದಾಖಲೆಗಳ ಕೊರತೆ ಇರುವದಾಗಿ ವೀರಾಜಪೇಟೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಮಾಹಿತಿ ನೀಡಿದ್ದಾರೆ.
ಕಳೆದ ತಾ. ೨ ರಂದು ‘ಶಕ್ತಿ’ಯಲ್ಲಿ ‘ಕಗ್ಗತ್ತಲೆಯಲ್ಲಿ ದುಬಾರೆ ಹಾಡಿ ನಿವಾಸಿಗಳ ಬದುಕು’ ಎಂಬ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸಿದ್ದಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಪ್ರತಿಕ್ರಿಯೆ ನೀಡಿದ್ದಾರೆ. ಹಾಡಿಯಲ್ಲಿ ಮೂರು ಕೊಳವೆ ಬಾವಿಗಳಿದ್ದು, ಅರಣ್ಯ ಇಲಾಖೆ ಅಳವಡಿಸಿರುವ ೩ ಸಾವಿರ ಸಾಮರ್ಥ್ಯದ ಮೂರು ಸಿಂಟೆಕ್ಸ್ಗಳ ಮೂಲಕ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ಇದೀಗ ಗ್ರಾ.ಪಂ. ವತಿಯಿಂದ ಇನ್ನೊಂದು ಕೊಳವೆ ಬಾವಿ ಕೊರೆಯಲಾಗಿದ್ದು, ಮೋಟಾರ್ ಅಳವಡಿಸಲಾಗಿದೆ. ೧೫ ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಸರಬರಾಜು ಆಗದಿರುವ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುವದು ಎಂದು ತಿಳಿಸಿದ್ದಾರೆ.
ಶೌಚಾಲಯ ವ್ಯವಸ್ಥೆ
ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛ ಬಾರತ್ ಮಿಷನ್ ಯೋಜನೆಯಡಿ ಇಲ್ಲಿನ ೪೦ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಅವುಗಳು ಉಪಯೋಗಕ್ಕೆ ಬಾರದಂತಾಗಿರುವದು ಕಂಡು ಬಂದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸೋಲಾರ್ ದುರಸ್ತಿ
ಹಾಡಿಯಲ್ಲಿ ೨೦ ಸೋಲಾರ್ ದೀಪಗಳನ್ನು ಅಳವಡಿಸಲಾಗಿತ್ತು, ಇದೀಗ ನಿರ್ವಹಣೆ ಇಲ್ಲದೆ ದುರಸ್ತಿಗೀಡಾಗಿವೆ. ಇವುಗಳನ್ನು ದುರಸ್ತಿಪಡಿಸಿದಲ್ಲಿ ಬೆಳಕಿನ ಸಮಸ್ಯೆ ಬಗೆಹರಿಯಲಿದೆ. ಈಗಾಗಲೇ ಹಾಡಿಯ ಮನೆಗಳಿಗೆ ಹಾಗೂ ಬೀದಿ ದೀಪ ಅಳವಡಿಸಲು ಸೆಸ್ಕ್ ಇಲಾಖೆಗೆ ಪತ್ರ ಬರೆಯಲಾಗಿದೆ. ಗ್ರಾ.ಪಂ. ವತಿಯಿಂದಲೂ ೪೪ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ದಾಖಲೆ ಕೊರತೆ
ಹಾಡಿಯಲ್ಲಿ ವಾಸವಿರುವ ೪೯ ಕುಟುಂಬಗಳಿಗೆ ಅರಣ್ಯ ಹಕ್ಕು ಪತ್ರ ನೀಡಲಾಗಿದೆ. ಅವರುಗಳಿಗೆ ಮನೆ ನಿರ್ಮಿಸಿಕೊಡಬಹುದಾಗಿದೆ. ಆದರೆ, ಕೇವಲ ೧೮ ಮಂದಿ ಮಾತ್ರ ಮನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಉಳಿದವರು ದಾಖಲೆಗಳ ಕೊರತೆಯಿಂದ ಅರ್ಜಿ ಸಲ್ಲಿಸಿರುವದಿಲ್ಲ. ಹಾಗಾಗಿ ಯಾವದಾದರೂ ಒಂದು ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಉಳಿದ ದಾಖಲೆ ಮಾಡಿಸಲು ಇಲಾಖೆಯಿಂದ ಸಹಕಾರ ನೀಡಲಾಗುವದೆಂದು ಹಾಡಿ ನಿವಾಸಿಗಳಲ್ಲಿ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಶಿಕ್ಷಣ
ಐಟಿಡಿಪಿ ಇಲಾಖೆಯಿಂದ ಹಾಡಿಯ ೪೧ ಕುಟುಂಬಗಳಿಗೆ ಪೌಷ್ಠಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಸುಸಜ್ಜಿತ ಅಂಗನವಾಡಿ ಕಟ್ಟಡ ಇದ್ದು, ೧೦ ಮಕ್ಕಳು ಸೌಲಭ್ಯ ಪಡೆಯುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ೨೬ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ಆವರಣ ಗೋಡೆ ಇಲ್ಲದಿರುವದು ಕಂಡು ಬಂದಿದೆ. ಹಾಡಿ ನಿವಾಸಿಗಳು ಅರ್ಧ ಕಿ.ಮೀ. ದೂರದಲ್ಲಿರುವ ನಂಜರಾಯಪಟ್ಟಣದ ಆರೋಗ್ಯ ಕೇಂದ್ರದಿAದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.