ಸೋಮವಾರಪೇಟೆ, ಜೂ. ೧೧: ಕಾಫಿ ತೋಟದಲ್ಲಿ ಮರ ಕಟಾವು ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆಳಬಿದ್ದು ಕಾರ್ಮಿಕ ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನಡೆದಿದೆ.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿ ನಿವಾಸಿ ನಾರಾಯಣ (೩೯) ಎಂಬವರೇ ಸಾವನ್ನಪ್ಪಿದವರಾಗಿದ್ದು, ಇಂದು ಮಧ್ಯಾಹ್ನ ೧ ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ.
ತಣ್ಣೀರುಹಳ್ಳ ಗ್ರಾಮದ ದೀಪಕ್ ಎಂಬವರ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ನಾರಾಯಣ ಅವರು, ತೋಟದಲ್ಲಿದ್ದ ಮರಗಳ ಕಟಾವು ಮಾಡುತ್ತಿದ್ದರು. ಮಧ್ಯಾಹ್ನದ ವೇಳೆಗೆ ನಂದಿ ಮರದ ಕೊಂಬೆಯನ್ನು ಕಡಿಯುತ್ತಿದ್ದ ಸಂದರ್ಭ ಮರದ ಕೊಂಬೆ ಸಮೀಪವಿದ್ದ ಮತ್ತೊಂದು ಮರಕ್ಕೆ ತಾಗಿ ವಾಪಸ್ ನಾರಾಯಣ ಅವರಿಗೆ ಬಡಿದಿದೆ.
ಇದರಿಂದಾಗಿ ಸುಮಾರು ೩೦ ಅಡಿ ಎತ್ತರದಿಂದ ಕೆಳಬಿದ್ದ ನಾರಾಯಣ ಅವರು, ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ.
ಮೃತರು ಪತ್ನಿ ಕಾಮಾಕ್ಷಿ ಸೇರಿದಂತೆ ಈರ್ವರು ಪುತ್ರರನ್ನು ಅಗಲಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.