ಚೆಯ್ಯಂಡಾಣೆ, ಜೂ. ೧೨: ಕುಂಜಿಲ ಕಕ್ಕಬ್ಬೆ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ತತ್ತರಿಸಿದ್ದು ಸೆರೆಹಿಡಿಯಲು ಬಾಕಿ ಇರುವ ಕಾಡಾನೆಯನ್ನು ಕೂಡಲೇ ಅರಣ್ಯಾಧಿಕಾರಿಗಳು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಡಾನೆ ಹಾವಳಿಯಿಂದ ನಷ್ಟ ಅನುಭವಿಸಿದ ತೋಟದ ಮಾಲೀಕರಿಗೆ ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಮೀನುಗಳ ಮಾರಣಹೋಮ
ನಿನ್ನೆ ಕಾಡಾನೆ ಗುಂಪು ಎಂ. ಪ್ರವೀಣ್ ಎಂಬವರ ಕೆರೆಗೆ ದಾಳಿ ಮಾಡಿ ಕೆರೆಯಲ್ಲಿ ಸಾಕಲಾಗಿದ್ದ ಸುಮಾರು ೨೦೦ ರಿಂದ ೩೦೦ ಮೀನುಗಳ ಮಾರಣಹೋಮ ನಡೆಸಿದ್ದು, ಸುಮಾರು ೬೦ ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಪರಿಹಾರ ನೀಡಬೇಕೆಂದು ಪ್ರವೀಣ್ ಮನವಿ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಮೊಣ್ಣಪ್ಪ ಹಾಗೂ ಗ್ರಾಮಸ್ಥರು ಈ ಕುರಿತು ಪ್ರತಿಕ್ರಿಯೆ ನೀಡಿ ಕೂಡಲೇ ಕಾರ್ಯಚರಣೆ ಆರಂಭಿಸಿ ಉಳಿದ ಆನೆಗಳನ್ನು ಸೆರೆ ಹಿಡಿಯಬೇಕು. ಕಾರ್ಯಾಚರಣೆ ಆರಂಭಿಸದಿದ್ದರೆ ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. -ಅಶ್ರಫ್