ಮಡಿಕೇರಿ, ಜೂ. ೧೨: ಅಗತ್ಯ ಸೇವೆಗಳಡಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ರಕ್ಷಣೆ ಸರಕಾರದ ಜವಾಬ್ದಾರಿ ಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆ ಇರುವ ಕಾರ್ಯಕರ್ತೆಯರ ವೈದ್ಯಕೀಯ ವೆಚ್ಚವನ್ನು ಸರಕಾರವೇ ಭರಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆ ಯರ ಸಂಘದ ರಾಜ್ಯಾಧ್ಯಕ್ಷ ಶಿವಶಂಕರ್ ತಿಳಿಸಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆ ಬಲವರ್ಧನೆಗೆ ಶಿಸ್ತು ಬಹುಮುಖ್ಯವಾಗಿದೆ. ಅಂಗನವಾಡಿ ಕಾರ್ಯಕರ್ತರು ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ಸವಲತ್ತು ಇಲ್ಲದ, ಸಂಬಳ ಕಡಿಮೆ ಇದ್ದ ಸಂದರ್ಭದಲ್ಲಿಯೂ ನಿರಂತರವಾಗಿ ಸೇವೆ ನೀಡಿದ್ದಾರೆ. ದೇಶವ್ಯಾಪಿ ನಡೆದ ಹೋರಾಟದ ಫಲವಾಗಿ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳಿಗೆ ಮನ್ನಣೆ ದೊರೆತಿದೆ. ಹೋರಾಟ ಕಾನೂನೂ ಚೌಕಟ್ಟಿನಡಿ ಮಾಡಿದ ಪರಿಣಾಮ ಸುಪ್ರೀಂ ಕೋರ್ಟ್ ಅಂಗನವಾಡಿ ಕಾರ್ಯಕರ್ತರಿಗೆ 'ಗ್ರಾö್ಯಜ್ಯುಟಿ' ಘೋಷಿಸಿದೆ. ಇದರಿಂದ ನಿವೃತ್ತಿ ಸಮಯದಲ್ಲಿ ಸಹಕಾರಿಯಾಗಲಿದೆ. ೮ ಅಗತ್ಯ ಸೇವೆಗಳು ನಿರ್ವಹಣೆ ಮಾಡುತ್ತಿರುವುದನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಪ್ರತಿ ರಾಜ್ಯದಲ್ಲಿ ‘ಗ್ರಾಜ್ಯುಟಿ’ ಅಳವಡಿಕೆಗೆ ಸುಪ್ರೀಂ ಸೂಚಿಸಿದೆ. ಆದರೆ, ನಿರ್ದಿಷ್ಟವಾದ ತೀರ್ಮಾನ ವಾಗುವ ತನಕ ಯೋಜನೆ ಜಾರಿಯಾಗಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಲವಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಹೋರಾಟ ಮಾಡದಿದ್ದರೆ ಬೇಡಿಕೆ ಈಡೇರುವುದಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಆರೋಗ್ಯ ಸಮಸ್ಯೆಗಳಿಗೆ ಸರಕಾರ ಆರ್ಥಿಕ ನೆರವು ನೀಡಬೇಕು. ಉಚಿತ ವೈದ್ಯಕೀಯ ಸವಲತ್ತು ದೊರಕಬೇಕು. ಇದರಿಂದ ನಿರಾಳವಾಗಿ ಜೀವನ ಸಾಗಿಸಬಹುದು. ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಸರಕಾರದ್ದಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ಹೋರಾಟ ಅಗತ್ಯವಾಗಿದೆ. ಇ.ಎಸ್.ಐ. ಹಾಗೂ ಪಿ.ಎಫ್. ಅಂಗನವಾಡಿ ಕಾರ್ಯಕರ್ತೆಯರಿಗೆ ಜಾರಿಯಾಗಬೇಕು. ಸಂಧ್ಯಾ ಸುರಕ್ಷಾ ಯೋಜನೆಗೆ ನಿವೃತ್ತಿಯಾದ ಕೂಡಲೇ ಅಂಗನವಾಡಿ ಕಾರ್ಯಕರ್ತೆಯರನ್ನು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಪೂರಕ ಪೌಷ್ಟಿಕಾಂಶ ಆಹಾರ ನೀಡುತ್ತಿರುವ ಹಿನ್ನೆಲೆ ಅಂಗನವಾಡಿ ಸಮಯ ಮಕ್ಕಳ ಹಿತದೃಷ್ಟಿಯಿಂದ ಬದಲಾವಣೆ ಮಾಡಬೇಕು. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ಕಳಪೆ ಮೊಬೈಲ್‌ನಿಂದ ಕೆಲಸಗಳ ‘ಅಪ್‌ಡೇಟ್’ ಮಾಡಲು ಅಸಾಧ್ಯ. ಈ ಕ್ರಮ ಹಿಂಪಡೆಯಬೇಕು. ಇಲಾಖೆ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ನೇಮಕಾತಿ, ವರ್ಗಾವಣೆಗೆ ಲಂಚ ಪಡೆದುಕೊಳ್ಳುತ್ತಿ ದ್ದಾರೆ. ೫ ವರ್ಷ ಪೂರ್ಣಗೊಂಡ ಅಧಿಕಾರಿಗಳ ವರ್ಗಾವಣೆ ಆಗುತ್ತಿಲ್ಲ. ಇಂತವರಿಗೆ ರಾಜಕಾರಣಿಗಳ ಬೆಂಬಲ ಇದೆ ಎಂದು ಆರೋಪಿಸಿದರು.

ಸ್ವಂತ ಕಟ್ಟಡ ಇಲ್ಲದ ಅಂಗನವಾಡಿ ಕಟ್ಟಡಗಳನ್ನು ಸ್ಥಳೀಯ ಸರಕಾರಿ ಶಾಲೆಯಲ್ಲಿ ಆರಂಭಿಸಲು ಸೂಚಿಸಲಾಗಿದೆ. ಆದರೆ, ಇದುವರೆಗೂ ಈ ಬಗ್ಗೆ ಕ್ರಮವಾಗಿಲ್ಲ. ಖಾಸಗಿ ಕಾನ್ವೆಂಟ್ ಶಾಲೆಗಳ ಲಾಭಿಯಿಂದ ಅಂಗನವಾಡಿ ಮುಚ್ಚುವ ಹಂತ ತಲುಪುತ್ತಿದೆ. ರಾಜ್ಯದಲ್ಲಿ ೯೫% ಅಂಗನವಾಡಿ ಕಾರ್ಯಕರ್ತೆಯರು ಗೌರವ ಧನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಉಚಿತ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಬೇಕು. ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ವೇತನ ಹೆಚ್ಚಳವಾಗ ಬೇಕಾಗಿದೆ ಎಂದು ಆಗ್ರಹಿಸಿದರು.

ಆರ್ಥಿಕ ಸಲಹೆಗಾರರಾದ ಗೀತಾ ಗಿರೀಶ್ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿ ಶಿಕ್ಷಕರ ಕೈಯಲಿದೆ. ಮಕ್ಕಳ ಪ್ರತಿಭೆ ಗುರುತಿಸುವುದು ಅಂಗನವಾಡಿ ಕಾರ್ಯಕರ್ತೆಯರು ದೇವರಿಗೆ ಸಮ. ಮಕ್ಕಳ ಪಾಲನೆ, ಪೋಷಣೆ ಮೂಲಕ ಇನ್ನೊಂದು ತಾಯಿ ಅಂಗನವಾಡಿ ಕಾರ್ಯಕರ್ತೆಯರಾಗಿದ್ದಾರೆ. ಅವರುಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯಾಗ ಬೇಕೆಂದರು.

ಕಾರ್ಯಕ್ರಮದಲ್ಲಿ ಸಂಘದ ತಾಲೂಕು ಅಧ್ಯಕ್ಷೆ ಮುತ್ತಮ್ಮ, ಕಾರ್ಯದರ್ಶಿ ಅಕ್ಕಮ್ಮ, ರಾಜ್ಯ ಸಮಿತಿ ಸದಸ್ಯೆ ಶಾರದ, ಮಾಜಿ ಜಿಲ್ಲಾಧ್ಯಕ್ಷೆ ತಾರಮಣಿ, ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಮೋಹನಾಕ್ಷಿ ಸೇರಿದಂತೆ ಇನ್ನಿತರರು ಹಾಜರಿದ್ದರು.