ಮಡಿಕೇರಿ, ಜೂ. ೧೦: ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ಕಲ್ಲುಗಳ ನಡುವೆ ಸಿಲುಕಿದ್ದ ಕೊಳಕು ಮಂಡಲ ಹಾವನ್ನು ಉರಗ ರಕ್ಷಕ ಸುರೇಶ್ ರಕ್ಷಿಸಿ ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯಿತಿಯ ಜಾಫರ್ ಅಲಿ ಅವರ ಮಾಹಿತಿ ಮೇರೆಗೆ ಸ್ನೇಕ್ ಸುರೇಶ್ ಸ್ಥಳಕ್ಕೆ ತೆರಳಿ ಹಾವಿನ ರಕ್ಷಣೆಗೆ ಮುಂದಾದರು. ಆದರೆ ಸುತ್ತ ಕಾಡು ಬೆಳೆದು ಕಲ್ಲು ಇದ್ದ ಹಿನ್ನೆಲೆ ರಕ್ಷಣೆ ತೊಡಕಾಯಿತು. ಮೂರು ದಿನದ ಸತತ ಪ್ರಯತ್ನದ ನಂತರ ಇಂದು ನಾಲ್ಕನೇ ದಿನ ಜೆಸಿಬಿಯನ್ನು ಬಳಸಿಕೊಂಡು ಕಾಡು ಕಲ್ಲುಗಳನ್ನು ತೆರವುಗೊಳಿಸಿ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಸುರೇಶ್ ಯಶಸ್ವಿಯಾದರು.