ಸೋಮವಾರಪೇಟೆ, ಜೂ. ೧೧: ಗರ್ಭಿಣಿ ಹಾಗೂ ಬಾಣಂತಿಯರು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ಮಹಿಳಾ ಸಮಾಜದ ಅಂಗನವಾಡಿಯಲ್ಲಿ ಆಯೋಜಿಸಿದ್ದ ಸೀಮಂತ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗರ್ಭಿಣಿ ಹಾಗೂ ಬಾಣಂತಿಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಆಗಾಗ್ಗೆ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯವಂತ ಮಗು ಪಡೆಯಲು ವೈದ್ಯರು ಸೂಚಿಸುವ ನಿರ್ದೇಶನಗಳನ್ನು ಪಾಲಿಸಬೇಕು. ಸರ್ಕಾರದಿಂದ ನೀಡಲಾಗುವ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕೆಂದು ಶಾಸಕರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಸವೇಶ್ವರ ವಾರ್ಡ್ ಸದಸ್ಯ ಮೃತ್ಯುಂಜಯ ಮಾತನಾಡಿ, ಈ ಹಿಂದೆ ಬಸವೇಶ್ವರ ರಸ್ತೆಯಲ್ಲಿ ಶಿಥಿಲಾವಸ್ಥೆಯ ಕಟ್ಟಡದಲ್ಲಿದ್ದ ಅಂಗನವಾಡಿ ಕೇಂದ್ರವನ್ನು ತಾತ್ಕಾಲಿಕವಾಗಿ ಮಹಿಳಾ ಸಮಾಜಕ್ಕೆ ಸ್ಥಳಾಂತರಿಸಲಾಗಿದೆ. ಬಸವೇಶ್ವರ ವಾರ್ಡ್ನಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ೫ ಸೆಂಟ್ ನಿವೇಶನವಿದ್ದು, ಈ ಸ್ಥಳದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಕ್ರಮ ವಹಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಜಾಗವನ್ನು ನೀಡಿದರೆ ತಕ್ಷಣ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಪಟ್ಟಣದಲ್ಲಿರುವ ೫ ಅಂಗನವಾಡಿಗಳ ಪೈಕಿ ೪ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿದ್ದು, ಬಸವೇಶ್ವರ ರಸ್ತೆ ವಾರ್ಡ್ನಲ್ಲಿ ಮಾತ್ರ ಸ್ವಂತ ಕಟ್ಟಡ ಇಲ್ಲವಾಗಿದೆ ಎಂದರು. ಜಾಗವನ್ನು ಇಲಾಖೆಗೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಂಜನ್ ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯ ಬಿ.ಆರ್. ಮಹೇಶ್, ಅಂಗನವಾಡಿ ಶಿಕ್ಷಕಿ ಜಗದಾಂಭ, ಆರೋಗ್ಯ ಇಲಾಖೆಯ ಅನಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು.