ವೀರಾಜಪೇಟೆ, ಜೂ. ೧೧: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಗಳನ್ನು ಭಾ.ಜ.ಪ. ಪದೇ ಪದೇ ರದ್ದು ಮಾಡುತ್ತಿರುವುದರ ಹಿಂದೆ ಸ್ಥಾಯಿ ಸಮಿತಿಯ ಅಧ್ಯಕ್ಷ ಚುನಾವಣೆಯಲ್ಲಿ ಸೋಲುವ ಭೀತಿ ಎಂದು ಪಟ್ಟಣ ಪಂಚಾಯಿತಿ ವಿರೋಧ ಪಕ್ಷಗಳು ಆರೋಪ ಮಾಡಿವೆ.
ಪಟ್ಟಣ ಪಂಚಾಯಿತಿಯ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರು ನಗರದ ಸರ್ಕಾರಿ ಅತಿಥಿಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್ ಪದ್ಮನಾಭ ನಿನ್ನೆ ನಡೆದ ಪ.ಪಂ. ಸಾಮಾನ್ಯ ಸಭೆಯನ್ನು ಆಡಳಿತ ಪಕ್ಷದವರು ಬೇಕಂತಲೇ ರದ್ದು ಮಾಡಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಸಭೆ ನಡೆದಿದ್ದು ಬಿಟ್ಟರೆ ಮಾಸಿಕ ಸಭೆಗಳೇ ನಡೆದಿರಲಿಲ್ಲ.
ಕಳೆದ ಮೇ ೨೪ ರಂದು ಸಭೆ ಕರೆದು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದ ಭೀತಿಯಿಂದ ಗೈರು ಹಾಜರಾಗಿದ್ದಾರೆ. ಮತ್ತೆ ಇಂದು ನಡೆದ ಸಭೆಯಲ್ಲಿ ಕಾರ್ಯಸೂಚಿ ಪ್ರಕಾರ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆ ಮೊದಲ ವಿಚಾರವಾಗಬೇಕಿತ್ತು.
ಆದರೆ ಅದನ್ನು ಕೊನೆಯ ವಿಚಾರವಾಗಿ ಮಾರ್ಪಾಡು ಮಾಡಿ ಹೊಸ ಕಾರ್ಯಸೂಚಿಯನ್ನು ಸಿದ್ಧಪಡಿಸಿದ್ದರು ಎಂದರು.
ಪ.ಪA. ಸದಸ್ಯ ರಂಜಿ ಪೂಣಚ್ಚ ಮಾತನಾಡುತ್ತಾ, ಇವರಿಗೆ ಕಾನೂನುಗಳ ಬಗ್ಗೆ ಗೌರವವಿಲ್ಲ. ಮಾಸಿಕ ಸಭೆಗಳು ನಡೆಯಲೇಬೇಕು.
ಅಧಿಕಾರ ಕಳೆದುಕೊಳ್ಳುವ ಅಸಹಾಯಕತೆಯಿಂದ ಹೀಗೆ ಮಾಡುತ್ತಿದ್ದಾರೆ ಎಂದರು.
ಸದಸ್ಯ ಮೊಹಮ್ಮದ್ ರಾಫಿ ಮಾತನಾಡಿ, ಕಾಯ್ದೆ ಪ್ರಕಾರ ಸಭೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ.ಪಂ. ಹಿರಿಯ ಸದಸ್ಯ ಪೃಥ್ವಿನಾಥ್ ಮಾತನಾಡಿ, ನಗರದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಒಂದೂವರೆ ವರ್ಷದಲ್ಲಿ ಕೇವಲ ನಾಲ್ಕು ಮಾಸಿಕ ಸಭೆ ನಡೆಸಿದ್ದಾರೆ. ಆಡಳಿತ ನಡೆಸಲು ಆಗದಿದ್ದಲ್ಲಿ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದೇ ಸೂಕ್ತ ಎಂದರು.
ಗೋಷ್ಠಿಯಲ್ಲಿ, ವಿರೋಧ ಪಕ್ಷದ ಸದಸ್ಯರುಗಳಾದ ದೇಚಮ್ಮ ಕಾಳಪ್ಪ, ಮತೀನ್ ಎಸ್.ಹೆಚ್., ರಜನಿಕಾಂತ್, ಫಸಿಹಾ ತಬಸುಮ್, ಅಗಸ್ಟಿನ್ ಬೆನ್ನಿ ಹಾಜರಿದ್ದರು.