ಪ್ರವಾದಿ ನಿಂದನೆ ಪ್ರಕರಣ - ಪ್ರತಿಭಟನೆ, ಹಿಂಸಾಚಾರ

ನವದೆಹಲಿ, ಜೂ. ೧೦: ಪ್ರವಾದಿ ಮೊಹಮ್ಮದ್ ಪೈಗಂಬರರ ಕುರಿತು ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರನ್ನು ಬಂಧಿಸುವAತೆ ಒತ್ತಾಯಿಸಿ, ರಾಷ್ಟç ರಾಜಧಾನಿ ನವದೆಹಲಿ, ಉತ್ತರ ಪ್ರದೇಶ, ಕೊಲ್ಕತ್ತಾ, ಪಂಜಾಬ್, ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಇಂದು ಮುಸ್ಲಿಮರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಕೆಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕಲ್ಲು ತೂರಾಟ, ಪೊಲೀಸರೊಂದಿಗೆ ಘರ್ಷಣೆ, ಅಶ್ರುವಾಯು ಪ್ರಯೋಗದ ಬಗ್ಗೆ ವರದಿಯಾಗಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನ ಅಟಲಾ ಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ ನಂತರ ಮುಸ್ಲಿಮರು ನೂಪುರ್ ಶರ್ಮಾ ಅವರ ಬಂಧನಕ್ಕಾಗಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದ್ದು, ಕಲ್ಲುತೂರಾಟ ನಡೆದಿದೆ. ಎಡಿಜಿಪಿ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಕಾರಿನ ಗಾಜುಗಳು ಪುಡಿಪುಡಿಯಾಗಿವೆ. ಪ್ರತಿಭಟನೆಯನ್ನು ಹತ್ತಿಕ್ಕುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಾರ್ಖಂಡ್‌ನ ರಾಂಚಿಯಲ್ಲೂ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಎಸ್.ಪಿ.ಗೆ ಗಾಯವಾಗಿದೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಕೋಲ್ಕತ್ತಾದ ಪಾರ್ಕ್ ಸರ್ಕಸ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂರು, ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೌರಾದಲ್ಲಿಯೂ ಪ್ರತಿಭಟನೆ ನಡೆಯಿತು. ಬಿಜೆಪಿಯಿಂದ ಅಮಾ ನತುಗೊಂಡಿರುವ ನೂಪುರ್ ಶರ್ಮಾ ಅವರನ್ನು ಬಂಧಿಸುವAತೆ ಆಗ್ರಹಿಸಿ ಕಲಬುರಗಿಯ ಮುಸ್ಲಿಂ ಚೌಕದಲ್ಲಿ ಭಾರೀ ಪ್ರತಿಭಟನೆ ನಡೆಸಲಾಯಿತು.

ಹರಿಯಾಣ - ಮತ ಎಣಿಕೆಗೆ ತಡೆ

ಹರ್ಯಾಣ, ಜೂ. ೧೦: ರಾಜ್ಯಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ಹರ್ಯಾಣದಲ್ಲಿ ತಡೆ ಹಿಡಿಯಲಾಗಿದೆ. ಬಿಜೆಪಿ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದು, ಹರ್ಯಾಣ, ಮಹಾರಾಷ್ಟçಗಳಲ್ಲಿ ನಡೆದ ಚುನಾವಣೆಯಲ್ಲಿ ಗೌಪ್ಯತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬಿಜೆಪಿ ಆಯೋಗವನ್ನು ಭೇಟಿ ಮಾಡಿ ಚುನಾವಣೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿತ್ತು. ಬಿಜೆಪಿ-ಜೆಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಕಾಂಗ್ರೆಸ್ ಶಾಸಕ ಕಿರಣ್ ಚೌಧರಿ ಹಾಗೂ ಬಿಬಿ ಬಾತ್ರ ಅವರ ಮತಗಳನ್ನು ೧೯೬೧ ರ ಚುನಾವಣಾ ನೀತಿ ಸಂಹಿತೆ ಹಾಗೂ ಮತಗಳ ಗೌಪ್ಯತೆ ನಿಯಮಗಳ ಉಲ್ಲಂಘನೆ ಕಾರಣದಿಂದ ರದ್ದು ಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಹರಿಯಾಣದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಕೇನ್ ಆಯೋಗಕ್ಕೆ ಪತ್ರ ಬರೆದಿದ್ದು, ಬಿಜೆಪಿ-ಜೆಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮ ಅವರ ಮನವಿಯನ್ನು ರದ್ದುಗೊಳಿಸಿ ಫಲಿತಾಂಶವನ್ನು ಶೀಘ್ರವೇ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

ಕೋಲ್ಕತ್ತಾದಲ್ಲಿ ಪೊಲೀಸ್ ಪೇದೆಯಿಂದ ಶೂಟೌಟ್

ಕೋಲ್ಕತ್ತಾ, ಜೂ. ೧೦: ಕೋಲ್ಕತ್ತಾದ ಡೆಪ್ಯುಟಿ ಹೈಕಮಿಷನ್ ಕಚೇರಿ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಪೇದೆಯೊಬ್ಬರು ಶುಕ್ರವಾರ ಮಧ್ಯಾಹ್ನ ತಮ್ಮ ರೈಫಲ್‌ನಿಂದ ಮನಬಂದAತೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವು ಸುತ್ತು ಗುಂಡು ಹಾರಿಸಿದ ಬಳಿಕ ಪೊಲೀಸ್ ಪೇದೆ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಪೇದೆಯ ಕೃತ್ಯದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸ್ ಪೇದೆ ಕನಿಷ್ಟ ೧೫ರಿಂದ ೧೭ ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಗೆ ಗುಂಡು ತಗುಲಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಡು ತಗುಲಿ ಮಹಿಳೆ ರಸ್ತೆಯಲ್ಲಿ ಕುಸಿದು ಬಿದ್ದ ನಂತರವೂ ಪೊಲೀಸ್ ಪೇದೆ ಗುಂಡು ಹಾರಿಸುತ್ತಲೇ ಇದ್ದರು. ಕಾನ್ಸ್ಟೇಬಲ್ ಅನ್ನು ನೋಡಿದ ಸ್ಥಳೀಯ ನಿವಾಸಿಗಳು ಯಾರೂ ಆತನನ್ನು ತಡೆಯುವ ಧೈರ್ಯ ಮಾಡಲಿಲ್ಲ' ಎಂದು ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಿಂದ ಸ್ಥಳೀಯ ಜನ ಭಯಭೀತರಾಗಿದ್ದು, ಪೊಲೀಸರಿಂದ ಸಾಧ್ಯವಾದಷ್ಟು ದೂರ ಓಡಲು ಪ್ರಾರಂಭಿಸಿದರು. ಐದು ನಿಮಿಷಕ್ಕೂ ಹೆಚ್ಚು ಕಾಲ ಕಾನ್‌ಸ್ಟೆಬಲ್ ಗುಂಡು ಹಾರಿಸುತ್ತಲೇ ಇದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಮಹಿಳೆ ಮೇಲೆ ಆ್ಯಸಿಡ್ ದಾಳಿ

ಬೆಂಗಳೂರು, ಜೂ. ೧೦: ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ದಾಳಿ ಪ್ರಕರಣ ವರದಿಯಾಗಿದ್ದು, ಮದುವೆಯಾಗಲು ನಿರಾಕರಿಸಿದ ಮಹಿಳೆ ಮೇಲೆ ವ್ಯಕ್ತಿ ಆ್ಯಸಿಡ್ ಎರಚಿದ್ದಾನೆ ಎನ್ನಲಾಗಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಸಾರಕ್ಕಿ ಬಳಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರ ಮೇಲೆ ಆ್ಯಸಿಡ್ ಎರಚಿ ವ್ಯಕ್ತಿ ಪರಾರಿಯಾಗಿದ್ದಾನೆ. ಪರಿಚಯಸ್ಥನೇ ಕೃತ್ಯ ಎಸಗಿರುವ ಶಂಕೆ ಇದೆ. ಮೂಲಗಳ ಪ್ರಕಾರ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ವ್ಯಕ್ತಿ ಆಕೆ ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಸ್ಥಳದಲ್ಲೇ ಆ್ಯಸಿಡ್ ಎರಚಿದ್ದಾನೆ ಎಂದು ತಿಳಿದುಬಂದಿದೆ. ಇಲ್ಯಾಸ್ ನಗರದ ನಿವಾಸಿಯಾಗಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಗಳ ಮೃತದೇಹ ಹೆಗಲ ಮೇಲೆ ಹೊತ್ತು ಸಾಗಿದ ತಂದೆ

ಛತ್ತರ್‌ಪುರ, ಜೂ. ೧೦: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಮಗುವಿನ ಶವ ಸಾಗಿಸಲು ಆ್ಯಂಬ್ಯುಲೆನ್ಸ್ ಇಲ್ಲದೇ ತಂದೆ ಮೃತದೇಹವನ್ನ ಹೆಗಲ ಮೇಲೆ ಹೊತ್ತುಕೊಂಡು ಸಾಗಿರುವ ಕರುಣಾಜನಕ ಘಟನೆ ವರದಿಯಾಗಿದೆ. ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಶವ ಸಾಗಿಸಲು ವಾಹನವನ್ನು ನೀಡಲಿಲ್ಲ. ಹೀಗಾಗಿ ನಾಲ್ಕು ವರ್ಷದ ಮಗುವಿನ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕಾಯಿತು ಎಂದು ಮೃತ ಬಾಲಕಿಯ ಕುಟುಂಬಸ್ಥರು ಹೇಳಿದ್ದಾರೆ. ಮಗುವಿನ ಆರೋಗ್ಯ ಹದಗೆಟ್ಟಿದ್ದರಿಂದ ಚಿಕಿತ್ಸೆಗಾಗಿ ಸೋಮವಾರ ಬಕ್ಸ್ವಾಹಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯ ಲಾಗಿತ್ತು. ನಂತರ ಮನೆಯವರು ಬಾಲಕಿಯನ್ನು ಪಕ್ಕದ ದಮೋಹ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅದೇ ದಿನ ಬಾಲಕಿ ಸಾವನ್ನಪ್ಪಿದ್ದು, ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಆಸ್ಪತ್ರೆಯ ಸಿಬ್ಬಂದಿಗೆ ಆ್ಯಂಬ್ಯುಲೆನ್ಸ್ ಕೇಳಿದರೂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಬಾಲಕಿಯ ಅಜ್ಜ ಮನ್ಸುಖ್ ಅಹಿರ್ವಾರ್ ಆರೋಪಿಸಿದ್ದಾರೆ. ಖಾಸಗಿ ವಾಹನ ವ್ಯವಸ್ಥೆ ಮಾಡಲು ನಮ್ಮಲ್ಲಿ ಹಣವಿಲ್ಲದ ಕಾರಣ ನಾವು ಬಾಲಕಿಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಬಕ್ಸ್ವಾಹಾಗೆ ಬಸ್ ಹತ್ತಿದೆವು ಎಂದು ಅವರು ಹೇಳಿದ್ದಾರೆ. ಬಕ್ಸ್ವಾಹಾ ತಲುಪಿದ ನಂತರ, ಬಾಲಕಿಯ ತಂದೆ ಲಕ್ಷö್ಮಣ್ ಅಹಿರ್ವಾರ್ ಅವರು ಶವವನ್ನು ಪೌಡಿ ಗ್ರಾಮಕ್ಕೆ ಕೊಂಡೊಯ್ಯಲು ವಾಹನವನ್ನು ಒದಗಿಸುವಂತೆ ನಗರ ಪಂಚಾಯಿತಿಗೆ ಕೇಳಿದರು, ಆದರೆ ಅವರೂ ಸಹ ನಿರಾಕರಿಸಿದರು ಎನ್ನಲಾಗಿದೆ.

ಮುಷರಫ್ ಆರೋಗ್ಯ ಸ್ಥಿತಿ ಗಂಭೀರ

ಲಾಹೋರ್/ದುಬೈ, ಜೂ. ೧೦: ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ, ಮಾಜಿ ಸೇನಾ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಅವರು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ೭೮ ವರ್ಷದ ಜನರಲ್ ಪರ್ವೇಜ್ ಮುಷರಫ್ ೧೯೯೯ ರಿಂದ ೨೦೦೮ ರವರೆಗೆ ಪಾಕಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ವೆಂಟಿಲೇಟರ್‌ನಲ್ಲಿದ್ದಾರೆ ಎಂಬ ವರದಿಗಳನ್ನು ಅವರ ಕುಟುಂಬ ಸ್ಪಷ್ಟವಾಗಿ ತಳ್ಳಿಹಾಕಿದೆ. ಆದರೆ ತೀವ್ರ ಅನಾರೋಗ್ಯದ ಹಿನ್ನೆಲೆ ಕಳೆದ ಮೂರು ವಾರ ಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರ ಸ್ಥಿತಿ ಗಂಭೀರ ವಾಗಿದ್ದು, ಚೇತರಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ತಲುಪಿದ್ದಾರೆ. ಅವರ ಅಂಗಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಷರಫ್ ಅವರ ಪುತ್ರನೊಂದಿಗೆ ಮಾತನಾಡಿದ್ದು, ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಇಮ್ರಾನ್ ಖಾನ್ ಸರ್ಕಾರದಲ್ಲಿ ಮಾಹಿತಿ ಸಚಿವರಾಗಿದ್ದ ಮತ್ತು ಮುಷರಫ್ ಅವರ ಮಾಧ್ಯಮ ವಕ್ತಾರರಾಗಿದ್ದ ಚೌಧರಿ ಅವರು ಹೇಳಿದ್ದಾರೆ.