ಸೋಮವಾರಪೇಟೆ, ಜೂ.೯: ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾರಂಗಿ ಹಿನ್ನೀರು ಪ್ರದೇಶದ ಯಡವಾರೆ ಭಾಗದಲ್ಲಿ ಮೀನುಗಳಿಗೆ ಗಾಳ, ಬಲೆ ಹಾಕುವುದು, ಗುಂಡು ಹೊಡೆಯುವ ಅಕ್ರಮ ಚಟುವಟಿಕೆ ನಿರಂತರವಾಗಿ ನಡೆಯುತ್ತಿದ್ದು, ಇದಕ್ಕೆ ಇಲಾಖೆಯ ಕೆಲ ಸಿಬ್ಬಂದಿಗಳ ಸಹಕಾರ ಇದೆ ಎಂದು ಸ್ಥಳೀಯರು ದೂರಿದ್ದಾರೆ.
ಹಾರಂಗಿಯಲ್ಲಿ ಮೀನುಗಾರಿಕೆ ಯನ್ನು ಸದ್ಯಕ್ಕೆ ನಿಷೇಧಿಸಿದ್ದರೂ ಅಕ್ರಮವಾಗಿ ಮೀನು ಹಿಡಿಯುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಗೊತ್ತಿದ್ದೂ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ತಡೆಯೊಡ್ಡುತ್ತಿಲ್ಲ. ಅಪರೂಪದ ಮಹಶಿರ್ ಮೀನುಗಳನ್ನು ಸಹ ಹಿಡಿಯಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಯಡವಾರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕೆಲವರನ್ನು ಕರೆಸಿ ವಿಚಾರಿಸಲಾಗಿದೆ. ಜೂನ್ ಒಂದರಿAದ ಜುಲೈ ಅಂತ್ಯದವರೆಗೆ ಯಾರೂ ಸಹ ಮೀನುಗಾರಿಕೆ ನಡೆಸಲು ಅವಕಾಶವಿಲ್ಲ. ನಂತರದ ದಿನಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆದಿರುವ ಮಂದಿ ಹಾಗೂ ಮೀನುಗಾರಿಕಾ ಸಂಘಗಳಿಗೆ ಅವಕಾಶ ನೀಡಲಾಗುವುದು ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ತಿಳಿಸಿದ್ದಾರೆ.