ಸೋಮವಾರಪೇಟೆ,ಜೂ.೯: ಸಮೀಪದ ಮಸಗೋಡು-ತಣ್ಣೀರುಹಳ್ಳ ಗ್ರಾಮದ ನಡುವಿನ ಕೊಣನೂರು ಸೋಮವಾರಪೇಟೆ ರಾಜ್ಯ ಹೆದ್ದಾರಿ ಬದಿಯಲ್ಲಿ ಟಿಂಬರ್ ಮರಗಳನ್ನು ಸಂಗ್ರಹಿಸಿ ಲಾರಿಗಳಿಗೆ ಲೋಡ್ ಮಾಡುತ್ತಿರುವುದರಿಂದ ಇತರ ವಾಹನಗಳ ಸಂಚಾರಕ್ಕೆ ಸಮಸ್ಯೆ ಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಾಜ್ಯ ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು, ಸರ್ಕಾರಿ ಮತ್ತು ಖಾಸಗಿ ಬಸ್ಗಳ ಸಂಚಾರವಿದ್ದು, ರಸ್ತೆಯ ಬದಿಯಲ್ಲಿಯೇ ಬೃಹತ್ ಯಂತ್ರಗಳನ್ನು ನಿಲ್ಲಿಸಿಕೊಂಡು ಮರಗಳನ್ನು ಲಾರಿಗಳಿಗೆ ಲೋಡ್ ಮಾಡುತ್ತಿರುವುದರಿಂದ ರಸ್ತೆಯಲ್ಲಿ ಯಾವುದೇ ವಾಹನಗಳಾಗಲಿ, ಜನರಾಗಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಅಕ್ಕಪಕ್ಕದ ಕಾಫಿ ತೋಟಗಳಿಂದ ಬಳಂಜಿ ಹಾಗೂ ಸಿಲ್ವರ್ ಮರಗಳನ್ನು ಕಡಿದು ರಸ್ತೆ ಬದಿಯಲ್ಲಿ ಶೇಖರಿಸಿಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಮರಗಳ ರಾಶಿ ಕಾಣದೇ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇದರೊಂದಿಗೆ ರಸ್ತೆ ಹಾಗೂ ಚರಂಡಿಯೂ ಹಾಳಾಗುತ್ತಿದ್ದು, ಸಂಬAಧಿಸಿದ ಲೋಕೋಪಯೋಗಿ ಇಲಾಖಾಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ತಣ್ಣೀರು ಹಳ್ಳ ಗ್ರಾಮದ ಹರೀಶ್ ಆರೋಪಿಸಿದ್ದಾರೆ.
ಪ್ರತಿದಿನ ಸಾಕಷ್ಟು ವಾಹನಗಳು ಮತ್ತು ಕಾರ್ಮಿಕರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಬೃಹತ್ ಮರದ ದಿಮ್ಮಿಗಳನ್ನು ಲಾರಿಗಳಿಗೆ ಲೋಡ್ ಮಾಡುವುದರಿಂದ ಯಾವುದೇ ಬದಿಯಿಂದ ತೆರಳಲು ಸಾದ್ಯವಾಗುತ್ತಿಲ್ಲ. ಶಾಲಾ ಕಾಲೇಜು, ಕಚೇರಿ ಕೆಲಸಗಳಿಗೆ ತೆರಳುವ ಮಂದಿ ಅನಗತ್ಯವಾಗಿ ನಿಂತು ಕಾಯಬೇಕಾಗಿದೆ. ಲೋಡ್ ಮಾಡುವಾಗ ಅಪ್ಪಿತಪ್ಪಿ ಮರ ಬಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಗ್ರಾಮಸ್ಥ ಗಣೇಶ್ ತಿಳಿಸಿದ್ದಾರೆ. ತಕ್ಷಣ ರಸ್ತೆ ಬದಿಯಲ್ಲಿ ಶೇಖರಿಸಿರುವ ಮರಗಳನ್ನು ತೆರವುಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.