ಶನಿವಾರಸಂತೆ, ಜೂ. ೯: ಹಲವು ವರ್ಷಗಳಿಂದ ಹೂಳು ತುಂಬಿ ಆಳೆತ್ತರಕ್ಕೆ ಬೆಳೆದು ನಿಂತಿದ್ದ ಕಾಡುಗಿಡ, ಕಳೆಸಸ್ಯಗಳಿಂದ ವಿನಾಶದ ಅಂಚಿಗೆ ಜಾರುತ್ತಾ ಕಾಯಕಲ್ಪದ ನಿರೀಕ್ಷೆಯಲ್ಲಿದ್ದ ಪುರಾತನ ಮಕ್ಕಳಕಟ್ಟೆ ಕೆರೆ ಪುನಶ್ಚೇತನಗೊಳ್ಳಲಿದೆ ಎಂಬ ಹೇಳಿಕೆ ಇದೀüಗ ಹುಸಿಯಾಗಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪುರಾತನ ಕೆರೆಯನ್ನು ಹಿಂದೆ ‘ಮಕ್ಕಳ ಕಟ್ಟೆ ಕೆರೆ’ ಎಂದು ಕರೆಯುತ್ತಿದ್ದರು. ಅನಂತರ ಕೆರೆಯ ಹೆಸರು ಬದಲಾಯಿತು. ಅಂದಿನ ಪುರಸಭಾ ಅಧ್ಯಕ್ಷ ಹಾಗೂ ಸಮಾಜ ಸೇವಕ ದಿವಂಗತ ಬಿ. ಗಂಗಪ್ಪ ಕರ್ಕೇರ ಅವರ ಮನೆಯ ಪಕ್ಕ ಕಾವೇರಿ ರಸ್ತೆಗೆ ಹೊಂದಿಕೊAಡAತೆ ಈ ಕೆರೆ ಇದ್ದುದರಿಂದ ಜನರು ಕೆರೆಯನ್ನು ‘ಗಂಗಪ್ಪ ಮಾಸ್ಟರ್ ಕೆರೆ’ ಎಂದು ಕರೆಯಲಾರಂಭಿಸಿದರು.
ಇಂದಿಗೂ ಊರ ಹಿರಿಯರ ಮಾತಲ್ಲಿ ಈ ಸಮಾಜ ಸೇವಕನ ಹೆಸರೇ ಉಳಿದುಕೊಂಡಿದೆ. ಅವರು ಅಧ್ಯಕ್ಷರಾಗಿದ್ದ ಅಷ್ಟೂ ಅವಧಿಯಲ್ಲಿ ಪ್ರತಿ ವರ್ಷ ಕೆರೆಯ ಹೂಳು ತೆಗೆಸಿ ಸ್ವಚ್ಛಗೊಳಿಸಲಾಗುತ್ತಿತ್ತು.
ಈ ಕೆರೆ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದ್ದರೂ, ಮಳೆಗಾಲದಲ್ಲಿ ತುಂಬಿ ತುಳುಕುತ್ತಿತ್ತು. ಮೀನುಗಳಿಗೆ, ಪಕ್ಷಿಗಳಿಗೆ ಆಶ್ರಯ ತಾಣವಾಗುತ್ತಿತ್ತು. ದನಕರುಗಳ ದಾಹ ಇಂಗಿಸುತ್ತಿತ್ತು.
ಯಾವುದೇ ಕಟ್ಟಡ ಅಥವಾ ಮನೆ ಕಟ್ಟುವವರಿU,ೆ ಇಟ್ಟಿಗೆ ಮಾಡುವವರಿಗೆ ಸಾಕಷ್ಟು ನೀರು ಒದಗಿಸುತ್ತಿತ್ತು. ೧೯೮೩ ರವರೆಗೆ ಪುರಸಭೆ ವ್ಯಾಪ್ತಿಗೆ ಒಳಪಟ್ಟ ಈ ಕೆರೆ ಏರಿ ಹೊಂದಿ ಸುಸ್ಥಿತಿಯಲ್ಲಿ ಇತ್ತು. ಏರಿ ಮೇಲೆ ಉದ್ಯಾನ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಅನಂತರದ ದಿನಗಳಿಂದ ಈ ಕೆರೆ ವಿನಾಶದ ಅಂಚಿಗೆ ಬಂದು ಗಮನ ಹರಿಸುವವರಿಲ್ಲದೇ ಹೂಳು, ಕಸಕಡ್ಡಿ ತುಂಬಿ ಕಳೆ ಸಸ್ಯ ಬೆಳೆಯತೊಡಗಿದವು. ೧೯೯೫ ರಿಂದ ಇಂದಿನವರೆಗೂ ಕೆರೆ ಕಸದ ಗುಂಡಿಯಾಗಿಯೇ ಉಳಿದಿದೆ.
ಚರಂಡಿಗಳಲ್ಲಿ ಹರಿದು ಬರುವ ಗ್ರಾಮದ ಕೊಳಚೆ ನೀರು, ಕಸಕಡ್ಡಿಗಳೆಲ್ಲವೂ ಕೆರೆ ಒಡಲನ್ನು ಸೇರುತ್ತಿತ್ತು. ಕಾರ್ಮಿಕರೂ ಕಸ ಕೊಳಚೆಯನ್ನೆಲ್ಲಾ ತಂದು ಕೆರೆ ಬದಿಗೆ ಸುರಿಯುತ್ತಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಹೊಟೇಲ್, ಕಲ್ಯಾಣ ಮಂಟಪಗಳಲ್ಲಿನ ಕಸದ ರಾಶಿಯನ್ನು ತಂದು ಕೆರೆಗೆ ಸುರಿಯಲಾಗುತ್ತಿತ್ತು. ಹೊಸಮನೆ ನಿರ್ಮಾಣ, ದುರಸ್ತಿ ತೋಟಗಾರಿಕೆಗಳಲ್ಲಿ ಬಳಸುವ ಹೆಚ್ಚಾದ ಮಣ್ಣನ್ನು ಟ್ರಾಕ್ಟರ್ಗಳಲ್ಲಿ ತುಂಬಿ ತಂದು ಕೆರೆ ಬದಿಯಲ್ಲಿ ಸುರಿಯಲಾಗುತ್ತಿತ್ತು.
ಇವುಗಳ ಪರಿಣಾಮವೋ ಎಂಬAತೆ ಕೆರೆ ಒಡಲಲ್ಲಿ ಆಳೆತ್ತರದ ಕಸ ಕಳೆ ಸಸ್ಯಗಳು ಬೆಳೆದು ನಿಂತವು. ಕೆರೆ ಎಂಬ ಕುರುಹೂ ಮಾಯವಾಗಿತ್ತು. ಕೆರೆ ಬಳಿಯೇ ಹಲವು ಕುಟುಂಬಗಳು ಮೂಗು ಮುಚ್ಚಿ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ೨೦೨೧ ರಲ್ಲಿ ಗ್ರಾಮ ಪಂಚಾಯಿತಿ ಮಕ್ಕಳ ಕಟ್ಟೆ ಕೆರೆಗೆ ಕಾಯಕಲ್ಪ ನೀಡಿ ಪುನಶ್ಚೇತನಗೊಳಿಸಲು ಕ್ರಮಕೈಗೊಂಡಿದ್ದು, ಕೆರೆಯ ಹೂಳು ತೆಗೆಸಿ, ಕಾಡು ಗಿಡ, ಕಳೆ ಸಸ್ಯವನ್ನೆಲ್ಲ ತೆರವುಗೊಳಿಸಿ ಸ್ವಚ್ಛಗೊಳಿಸಿತ್ತು. ಪಂಚಾಯಿತಿ ಕ್ರೀಯಾಯೋಜನೆ ರೂಪಿಸಿದ್ದು ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಅಭಿವೃದ್ಧಿಪಡಿಸಲು ಕಾಮಗಾರಿ ಆರಂಭಿಸಲಿದೆ. ಸುಮಾರು ೯೫ ಸೆಂಟು ವಿಸ್ತೀರ್ಣದ ಹೊಳನ್ನು ಮತ್ತೊಮ್ಮೆ ತೆಗೆಸಿ, ಸುತ್ತಲೂ ಕಲ್ಲುಗಳನ್ನು ಅಳವಡಿಸಿ ಏರಿ ನಿರ್ಮಿಸಲಾಗುವುದು. ಏರಿಯ ಮೇಲೆ ಉದ್ಯಾನ ನಿರ್ಮಿಸಿ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ತಿಳಿಸಿದ್ದರು. ಆದರೆ ವರ್ಷ ಕಳೆದರೂ ಉದ್ಯಾನ ನಿರ್ಮಾಣವಾಗಲೇ ಇಲ್ಲ. ಕೆರೆ ಒಡಲಲ್ಲಿ ಮತ್ತೆ ಹೂಳು ತುಂಬಿದೆ. ಆಳೆತ್ತರ ಕಳೆ ಸಸ್ಯಗಳು ಬೆಳೆದು ನಿಂತಿವೆÉ. ವಾಯು ವಿಹಾರವಿರಲಿ ರಸ್ತೆಯಲ್ಲಿ ವಾಕಿಂಗ್ ಹೋಗುವಾಗ ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಂದರ ಹೂವುಗಳ ಬದಲು ಕಳೆ ಸಸ್ಯೋದ್ಯಾನ ನಿರ್ಮಾಣವಾಗಿದೆ. ಎಂದು ಹಿರಿಯ ನಾಗರಿಕರೊಬ್ಬರು ಅಭಿಪ್ರಾಯಪಟ್ಟರು.
ಪಂಚಾಯಿತಿ ವ್ಯಾಪ್ತಿಯಲ್ಲಿನ ಏಕೈಕ ಕೆರೆ ಪುನಶ್ಚೇತನಗೊಳಿಸಿ ಅಂತರ್ಜಲಮಟ್ಟ ಕಾಪಾಡಿಕೊಳ್ಳುವ ಬಗ್ಗೆ ಒಲವು ವ್ಯಕ್ತಪಡಿಸಿದ್ದ ಆಡಳಿತ ಮಂಡಳಿ ಮೌನವ್ರತ ತಾಳಿದೆ. ಕೆರೆ ಬದಿಯಲ್ಲಿ ಎಂದಿನAತೆ ಸಾರ್ವಜನಿಕರು ತ್ಯಾಜ್ಯ ಸುರಿಯುತ್ತಿದ್ದಾರೆ. -ನರೇಶ್ಚಂದ್ರ, ಶನಿವಾರಸಂತೆ