ಆಲೂರುಸಿದ್ದಾಪುರ, ಜೂ. ೮: ಗಣಗೂರು ಗ್ರಾ.ಪಂ.ಗೆ ಸೇರಿದ ಕುಶಾಲನಗರ-ಶನಿವಾರಸಂತೆ ಹೆದ್ದಾರಿ ಬಳಿಯ ಬಾಣಾವರ ಕಾಡುಹಾಡಿ ಗಿರಿಜನ ನಿವಾಸಿಗಳು ಹಕ್ಕುಪತ್ರ ಸಮಸ್ಯೆಯಿಂದ ಮೂಲ ಸೌಕರ್ಯಗಳಿಂದ ವಂಚಿತಗೊAಡಿದ್ದಾರೆ.

೨೦೦೨ ರಿಂದ ಬಾಣಾವರ ಕಾಡುಹಾಡಿಯಲ್ಲಿ ಜೇನು ಕುರುಬ ಜನಾಂಗದವರು ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರಾರಂಭದಲ್ಲಿ ಇಲ್ಲಿ ಸುಮಾರು ೩೫ ಕುಟುಂಬಗಳು ಗುಡಿಸಲು ನಿರ್ಮಿಸಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವು. ಮೂಲ ಸೌಕರ್ಯಗಳಿಲ್ಲದೆ ದಿನೇ ದಿನೇ ಇಲ್ಲಿ ವಾಸ ಇದ್ದ ನಿವಾಸಿಗಳು ಬೇರೆ ಊರುಗಳಿಗೆ ವಲಸೆ ಹೋಗಲಾರಂಭಿಸಿದರು. ಈಗ ಈ ಕಾಡುಹಾಡಿಯಲ್ಲಿ ೯ ಕುಟುಂಬಗಳಿದ್ದು ೬೦ ಜನಸಂಖ್ಯೆಯನ್ನು ಹೊಂದಿದೆ. ಬಹುತೇಕ ನಿವಾಸಿಗಳು ಮತದಾನ ಹಕ್ಕುಪತ್ರ ಹೊಂದಿದ್ದಾರೆ. ಪ್ರತಿಯೊಬ್ಬರು ಆಧಾರ್‌ಕಾರ್ಡ್, ಪಡಿತರ ಚೀಟಿ ಹೊಂದಿದ್ದಾರೆ. ಕಾಡುಹಾಡಿಯಲ್ಲಿ ಒಬ್ಬ ಪದವೀಧರನಿದ್ದು ಮೂವರು ಯುವತಿಯರು ಪಿಯುಸಿ ವರೆಗೆ ವ್ಯಾಸಂಗ ಮಾಡಿದ್ದು ಯಾವುದೇ ಸರಕಾರಿ ಕೆಲಸವಾಗಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸವಾಗಲಿ ಸಿಗದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಹಾಡಿಯಲ್ಲಿ ಬಹುತೇಕ ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಕೆಲ ಪುಟ್ಟ ಪುಟ್ಟ ಮಕ್ಕಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಹಕ್ಕುಪತ್ರಕ್ಕೆ ತಕರಾರು: ಹಕ್ಕುಪತ್ರ ನೀಡಲು ಅರಣ್ಯ ಇಲಾಖೆ ಹಾಡಿ ಜನರಿಗೆ ಮೂಲ ದಾಖಲೆ ಕೇಳುತ್ತಿರುವ ಹಿನ್ನೆಲೆಯಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮ ಅರಣ್ಯ ಹಕ್ಕು ಸಮಿತಿ ಅಡಿಯಲ್ಲಿ ಮನೆ ನಿರ್ಮಿಸಲು ಹಕ್ಕುಪತ್ರ ವಿತರಿಸುವ ಅವಕಾಶ ಇದ್ದರೂ ಸಹ ಅರಣ್ಯ ಇಲಾಖೆಯವರು ಗಿರಿಜನರು ಈ ಹಾಡಿಯಲ್ಲಿ ವಾಸ ಇದ್ದಿದಕ್ಕೆ ಮೂಲತಃ ದಾಖಲಾತಿ ಪುರಾವೆ ಅಗತ್ಯವಿದೆ. ಆಗ ಮಾತ್ರ ಹಕ್ಕುಪತ್ರಕ್ಕೆ ಅನುಮತಿ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಮೂಲ ದಾಖಲಾತಿ ನೀಡಲು ಇಲ್ಲಿನ ನಿವಾಸಿಗಳಿಗೆ ಸಾಧ್ಯವಾಗುತ್ತಿಲ್ಲ. ಐಟಿಡಿಪಿ, ಸಮಾಜ ಕಲ್ಯಾಣ ಇಲಾಖೆ, ಗ್ರಾ.ಪಂ.ಯವರು ಮನೆ ನಿರ್ಮಿಸಿ ಕೊಡಲು ಸಿದ್ಧ ಇದ್ದರೂ ಹಕ್ಕುಪತ್ರ ಇಲ್ಲದ ಕಾರಣದಿಂದ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ. ಹಾಡಿ ಸಮೀಪದ ರಸ್ತೆ ಬದಿಯಲ್ಲಿ ಗ್ರಾ.ಪಂ.ಯಿAದ ಕುಡಿಯುವ ನೀರಿನ ವ್ಯವಸ್ಥೆಯೊಂದನ್ನು ಮಾಡಲಾಗಿದೆ. ಆದರೆ ಮನೆ, ವಿದ್ಯುತ್, ರಸ್ತೆ-ಚರಂಡಿ ಮೂಲಕ ಸೌಕರ್ಯ ಗಳಿಂದ ಇಲ್ಲಿನ ಹಾಡಿ ಜನರು ವಂಚಿತಗೊAಡಿದ್ದಾರೆ. ಹುಲ್ಲಿನ ಗುಡಿಸಲು, ಟಾರ್ಪಲ್, ಶೀಟ್ ಅಳವಡಿಸಿಕೊಂಡು ಹಾಡಿ ಜನರು ಜೀವನ ನಡೆಸುತ್ತಿದ್ದಾರೆ. ಮಳೆಗಾಲ ದಲ್ಲಿ ಗುಡಿಸಿಲಿನ ಮೇಲೆ ಮರದ ಕೊಂಬೆಗಳು ಯಾವ ಸಂದರ್ಭದಲ್ಲಿ ಬಿದ್ದು ಅನಾಹುತ ಆಗಬಹುದೆಂಬ ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

- ದಿನೇಶ್ ಮಾಲಂಬಿ