ಮುಳ್ಳೂರು, ಜೂ. ೮: ಸಮೀಪದ ಶನಿವಾರಸಂತೆ ಗ್ರಾ.ಪಂ. ಆಡಳಿತ ಮಂಡಳಿಯ ವಿಶೇಷ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕಸವಿಲೇವಾರಿ, ಗ್ರಾ.ಪಂ. ಅಭಿವೃದ್ಧಿ ಸೇರಿದಂತೆ ಗ್ರಾ.ಪಂ. ಆಡಳಿತದಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಯಿತು.

ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಸ್ಥಳಗಳಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಕಟ್ಟಡ ನಿರ್ಮಾಣ ಮಾಲೀಕರಿಗೆ ಪಕ್ಕದ ದುಂಡಳ್ಳಿ ಗ್ರಾ.ಪಂ.ಯವರು ಕಾನೂನು ಬಾಹಿರವಾಗಿ ಪರವಾನಿಗೆ ಮತ್ತು ಎನ್.ಒ.ಸಿ. ನೀಡುತ್ತಿರುವ ಬಗ್ಗೆ ಸದಸ್ಯ ರಾದ ಎಸ್.ಎನ್. ರಘು, ಸರ್ದಾರ್ ಆಹಮ್ಮದ್, ಎನ್.ಎ. ಆದಿತ್ಯ ಗೌಡ ಪ್ರಸ್ತಾಪಿಸಿದರು.

ಈ ಕುರಿತು ಸುದೀರ್ಘವಾಗಿ ನಡೆದ ಚರ್ಚೆಯ ಕೊನೆಯಲ್ಲಿ ಸದರಿ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ಕಟ್ಟಡ ನಿರ್ಮಾಣ ಕಾಮಗಾರಿಗೆ ಗ್ರಾ.ಪಂ. ಯಿಂದ ಎನ್.ಒ.ಸಿ, ಪರವಾನಿಗೆ ಕೊಡ ಬೇಕಾಗಿದ್ದರೂ ಪಕ್ಕದ ದುಂಡಳ್ಳಿ ಗ್ರಾ.ಪಂ.ಯವರು ಕಾನೂನು ಬಾಹಿರವಾಗಿ ಪರವಾನಿಗೆ ಕೊಡುತ್ತಿದ್ದು ಈ ಬಗ್ಗೆ ಶನಿವಾರಸಂತೆ ಗ್ರಾ.ಪಂ. ಯಿಂದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ದೂರು ನೀಡುವಂತೆ ಒಮ್ಮತ್ತದಿಂದ ನಿರ್ಣಯಿಸಲಾಯಿತು. ಉದ್ಯೋಗ ಖಾತ್ರಿ ಯೋಜನೆ ವತಿಯಿಂದ ಶನಿವಾರಸಂತೆ ಗ್ರಾ.ಪಂ.ಯ ನೂತನ ಕಚೇರಿಯ ಕಟ್ಟಡ ಕಾಮಗಾರಿ ಸೇರಿದಂತೆ ಗುಂಡೂರಾವ್ ಬಡಾವಣೆ ಯಲ್ಲಿರುವ ಸಾರ್ವಜನಿಕ ಕೆರೆಯನ್ನು ರೂ. ೧೨ ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕಾರ್ಯದಲ್ಲಿ ಕಾಮಗಾರಿ ಕ್ರಿಯಾಯೋಜನೆ ಸೇರಿದಂತೆ ಇತರೆ ಹೊಣೆಗಾರಿಕೆ ಉದ್ಯೋಗ ಖಾತ್ರಿ ಯೋಜನೆಯ ಅಭಿಯಂತರ ಅವರ ಕರ್ತವ್ಯ ಆಗಿರುತ್ತದೆ. ಆದರೆ ಶನಿವಾರಸಂತೆ ಗ್ರಾ.ಪಂ.ಯ ಉದ್ಯೋಗ ಖಾತ್ರಿ ಯೋಜನೆಯ ಅಭಿಯಂತರ ಗ್ರಾ.ಪಂ. ಕಚೇರಿ ಕಟ್ಟಡ ಕಾಮಗಾರಿ ಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಸದಸ್ಯರಾದ ಸರ್ದಾರ್ ಆಹಮ್ಮದ್, ಎಸ್.ಎನ್. ರಘು ಅಸಮಾಧಾನ ವ್ಯಕ್ತ ಪಡಿಸಿದರು. ಶನಿವಾರಸಂತೆ ಸರಕಾರಿ ಆಸ್ಪತ್ರೆ ಸಮೀಪದ ಸ್ಥಳದಲ್ಲಿ ಕಸವಿಲೇವಾರಿ ಆಗುತ್ತಿರುವುದರಿಂದ ಜನರಿಗೆ ತುಂಬಾ ತೊಂದರೆ ಯಾಗುತ್ತಿರುವ ಬಗ್ಗೆ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದರು. ಈ ಹಿಂದೆ ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ಸ್ಥಳದಲ್ಲಿ ಕಸವಿಲೇವಾರಿ ಘಟಕ ಮಾಡಲು ಗುರುತಿಸಿರುವ ಸ್ಥಳದಲ್ಲಿ ಕಾನೂನಾ ತ್ಮಕವಾಗಿ ಮಾಡಲಾಗುತ್ತದೆ ಎಂದು ಸದಸ್ಯ ಎಸ್.ಎನ್. ರಘು ಸದಸ್ಯರಿಗೆ ಭರವಸೆ ನೀಡಿದರು. ಗ್ರಾ.ಪಂ. ಪಿಡಿಒ ಗ್ರಾ.ಪಂ.ಗೆ ಒಳಪಡುವ ವಾರ್ಡ್ಗಳಿಗೆ ಭೇಟಿ ನೀಡಿ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿರುವುದರ ಬಗ್ಗೆ ಮಾಹಿತಿ ತಿಳಿದುಕೊಂಡು ಪರಿಶೀಲನೆ ನಡೆಸುತ್ತಿರಬೇಕು. ಇದಕ್ಕೆ ಗ್ರಾ.ಪಂ. ಸದಸ್ಯರಿಂದ ಬೆಂಬಲ ಇರುತ್ತದೆ. ಇದರಿಂದ ಪಟ್ಟಣದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ಇತರೆ ಯಾವುದೇ ಕಾನೂನು ಬಾಹಿರ ಪ್ರಕರಣಗಳು ನಡೆಯುವುದಿಲ್ಲ ಎಂದು ಸದಸ್ಯ ಆದಿತ್ಯ ಗೌಡ ಸಲಹೆ ನೀಡಿದರು. ಸಭೆಯಲ್ಲಿ ಸಂತೆ ಮಾರುಕಟ್ಟೆ ಅಭಿವೃದ್ಧಿ, ಚರಂಡಿ, ಸ್ವಚ್ಛತೆ, ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಗ್ರಾ.ಪಂ. ಕಾರ್ಯದರ್ಶಿ ಯಾಗಿ ಇತ್ತೀಚೆಗೆ ನಿವೃತ್ತಿಗೊಂಡ ತಮ್ಮಯ್ಯ ಆಚಾರ್ ಅವರನ್ನು ಗ್ರಾ.ಪಂ. ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಗ್ರಾ.ಪಂ. ಪಿಡಿಒ ಮೇದಪ್ಪ, ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಎನ್. ರಘು, ಸರ್ದಾರ್ ಆಹಮ್ಮದ್, ಕೆ.ಎ. ಆದಿತ್ಯ ಗೌಡ, ಗೀತ ಹರೀಶ್, ಫರ್ಜಾನ್ ಶಾಹಿದ್, ಸರಸ್ವತಿ, ಗ್ರಾ.ಪಂ. ಸಿಬ್ಬಂದಿ ಪೌಜೀಯಾ ಮುಂತಾದವರು ಹಾಜರಿದ್ದರು.