ಸಿದ್ದಾಪುರ, ಜೂ. ೮: ಕರಡಿಗೋಡು ಗ್ರಾಮದಲ್ಲಿ ಒಂಟಿ ಸಲಗ ಬೀಡುಬಿಟ್ಟಿದ್ದು, ಕಳೆದ ಹಲವು ತಿಂಗಳುಗಳಿAದ ಕರಡಿಗೋಡು ಭಾಗದ ಕಾಫಿ ತೋಟಗಳಲ್ಲಿನ ಕೃಷಿ ಫಸಲನ್ನು ನಾಶಗೊಳಿಸುತ್ತಿದೆ. ಇಂದೂ ಕೂಡ ಸಲಗ ಕಾಫಿ ತೋಟದಲ್ಲಿ ದಾಂಧಲೆ ನಡೆಸಿ, ಕಾಫಿ ಗಿಡ ಹಾಗೂ ತೆಂಗಿನ ಮರ ಸೇರಿದಂತೆ ಕೃಷಿ ಫಸಲನ್ನು ನಾಶ ಮಾಡಿದೆ. ಕಾಡಾನೆ ಹಾವಳಿಯಿಂದಾಗಿ ತೋಟ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಈ ಭಾಗದ ಬೆಳೆಗಾರರೊಬ್ಬರನ್ನು ಬಲಿ ಪಡೆದಿದ್ದು ಇದೇ ಕಾಡಾನೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಾಡಾನೆ ಹಾವಳಿ ಮಿತಿ ಮೀರಿರುವುದರಿಂದ ಸಮೀಪದಲ್ಲೇ ಸರಕಾರಿ ಶಾಲೆಯಿದ್ದು ಪೋಷಕರು ಆತಂಕದಲ್ಲಿದ್ದಾರೆ. ಪುಂಡಾನೆಯನ್ನು ಸೆರೆ ಹಿಡಿಯಬೇಕೆಂದು ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಸೇರಿದಂತೆ ಬೆಳೆಗಾರರು ಒತ್ತಾಯಿಸಿದ್ದಾರೆ.